ಸಂಕ್ರಾಂತಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಫ್ಜಲಪೂರ ಟಕ್ಕೆಯಲ್ಲಿರುವ ಬಾಲಕರ ಬಾಲ ಮಂದಿರದ ಮಕ್ಕಳೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಮೂಲಕ ಗಮನ ಸೆಳೆದು ಮಕ್ಕಳಿಗೆ ಹಬ್ಬದ ಶುಭ ಕೋರಿದರು. ಹಬ್ಬದ ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸಿದ ಜಿಲ್ಲಾಧಿಕಾರಿ ಮಕ್ಕಳೊಂದಿಗೆ ಬೆರೆತು ಹಬ್ಬದ ಶುಭ ಕೋರಿದರು. ಎಲ್ಲ ಮಕ್ಕಳಿಗೂ ಹೊಸ ಬಟ್ಟೆಯ ಉಡುಗೊರೆ ನೀಡಿ, ಸಂಕ್ರಾತಿ ಹಬ್ಬದ ಸಾಂಪ್ರದಾಯಿಕ ಸಿಹಿ ತಿನಿಸುಗಳಾದ ಕಬ್ಬು, ಕುಸರೆಳ್ಳು ಮೊದಲಾದವುಗಳನ್ನು ಸಂತೋಷದಿಂದ ವಿತರಿಸಿ ಹಬ್ಬದ ಶುಭಕೋರಿದ್ದು ವಿಶೇಷವಾಗಿತ್ತು.
ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನವದೆಹಲಿಯ ಲಾಡಲಿ ಫೌಂಡೇಷನ್ ಪ್ರತಿಷ್ಠಾನದ ಸಹಯೋಗದಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಲಾಡಲಿ ಫೌಂಡೇಷನ್ ರಾಷ್ಟ್ರೀಯ ಸಲಹೆಗಾರ ಡಾ.ಜಾವೀದ ಜಮಾದಾರ ಮಾತನಾಡಿ, ಬಾಲ ಮಂದಿರ ಮಕ್ಕಳ ಹಿತರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕ ಹಾಗೂ ಸಮಾಜ ಸೇವಾ ಸಂಸ್ಥೆಗಳ ಆದ್ಯ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಬಾಲಮಂದಿರ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಪಣವನ್ನು ಸ್ವೀಕರಿಸೋಣ ಎಂದರು. ಬಡ, ನಿರ್ಗತಿಕ ಮಕ್ಕಳ ಕಲ್ಯಾಣಕ್ಕಾಗಿ ಪ್ರತಿಯೊಬ್ಬರು ಸಹಾಯಹಸ್ತ ಚಾಚುವ ಮನೋಭಾವ ರೂಢಿಸಿಕೊಳ್ಳಬೇಕಿದೆ ಎಂದರು. ಮಕ್ಕಳು ಸಹ ಸ್ಪಷ್ಟವಾದ ಗುರಿಯನ್ನು ಹೊಂದಿ ಆ ಗುರಿ ಕ್ರಮಿಸಲು ಗುರುವಿನ ಮಾರ್ಗದರ್ಶನದೊಂದಿಗೆ ಮುನ್ನಡೆಯಬೇಕು, ಸಾಧನೆಯಿಂದ ತಮ್ಮನ್ನು ಗುರುತಿಸಿಕೊಳ್ಳುವ ಮಟ್ಟಕ್ಕೆ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸ್ವತ: ಮಕ್ಕಳ ಜೊತೆ ಹಬ್ಬದ ಸಂಭ್ರಮದಲ್ಲಿ ತೊಡಗಿರುವುದು ಮಕ್ಕಳಿಗೂ ಖುಷಿ ತರಿಸಿದೆ, ಜಿಲ್ಲಾಧಿಕಾರಿಗಳ ನಡೆ ಮಾದರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಲಾಡಲಿ ಫೌಂಡೇಷನ್ ವತಿಯಿಂದ ಬ್ಯಾಗ್, ಲೇಖನ ಸಾಮಗ್ರಿ ಹಾಗೂ ನೈರ್ಮಲ್ಯ ಕೈಪಿಡಿಗಳನ್ನು ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಕೆ. ಚವ್ಹಾಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಬಾಲಮಂದಿರದ ಅಧೀಕ್ಷಕಿ ಜಯಶ್ರೀ ಪವಾರ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಸುಮಾ ಚೌಧರಿ, ಕಲಾವತಿ ಉಪಸ್ಥಿತರಿದ್ದರು.
ಮೌನೇಶ ಪೋತದಾರ ಕಾರ್ಯಕ್ರಮ ನಿರೂಪಿಸಿದರು.