ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಇಲಾಖೆಗಳಿಗೆ ನೀರು ಪೂರೈಕೆ ಕುರಿತು ಇಂದಿನ ಕೆ.ಡಿ.ಪಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು. ಇದೇ ವೇಳೆ ಸ್ಲಂ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿ, ವಿಳಂಬ ನೀತಿ ಅನುಸರಿಸಿದ್ದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಕೆ.ಡಿ.ಪಿ ಸಭೆಯನ್ನು ಕರೆಯಲಾಗಿತ್ತು. ವೇದಿಕೆಯ ಮೇಲೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಸರ್ಕಾರದ ಮುಖ್ಯಸಚೇತಕರಾದ ಪ್ರಕಾಶ್ ಹುಕ್ಕೇರಿ, ಶಾಸಕ ರಾಜು ಕಾಗೆ, ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಭೀಮಾಶಂಕರ ಗುಳೇದ ಸೇರಿದಂತೆ ಇನ್ನುಳಿದ ಅಧಿಕಾರಿಗಳು ಉಪಸ್ಥಿತರಿದ್ಧರು.
ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ ಧಾರವಾಡಕ್ಕೆ ನೀರು ಪೂರೈಕೆ ಶಾಸಕ ಆಸೀಫ್ ಸೇಠ್ ಅವರು ಪ್ರಶ್ನಿಸಿದಾಗ ಜಿಲ್ಲಾಧಿಕಾರಿಗಳು, ರಾಜ್ಯಮಟ್ಟದ ಉನ್ನತ ಸಮಿತಿಯ ಸೂಚನೆಯನ್ನೇ ಜಲಸಂಪನ್ಮೂಲ ಇಲಾಖೆಯೂ ಪ್ರತಿಯೊಂದು ಜಲಾಶಯದಲ್ಲಿ ಕುಡಿಯುವ ನೀರು ಮತ್ತು ನೀರಾವರಿ ಯೋಜನೆ ಹೊರತುಪಡಿಸಿದ ಕೈಗಾರಿಕಾ ಕೇತ್ರಗಳಿಗಾಗಿಯೇ ನೀರನ್ನು ಮೀಸಲಿಟ್ಟಿರುತ್ತಾರೆ. 8 ವರ್ಷಗಳಿಂದ ಹಿಡಕಲ್ ಡ್ಯಾಂನಲ್ಲಿ 4 ಟಿ.ಎಂ.ಸಿ ನೀರನ್ನು ಮೀಸಲಿಡಲಾಗಿದೆ. ಇದರಲ್ಲಿ ಒಟ್ಟು 0.58 ಟಿ.ಎಂ.ಸಿ ನೀರನ್ನು ಕಿತ್ತೂರು ಮತ್ತು ಧಾರವಾಡ ಕೈಗಾರಿಕಾ ಕ್ಷೇತ್ರಗಳಿಗೆ ನೀರನ್ನು ಪೂರೈಸಲು ಟೆಂಡರ ಕರೆದು ಕಾಮಗಾರಿ ನಡೆಸಲಾಗುತ್ತಿದೆ ಎಂದರು. ಇನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಇದಕ್ಕೆ ಜಲಸಂಪನ್ಮೂಲ ಇಲಾಖೆಯಿಂದ ಅನುಮತಿ ನೀಡಿಲ್ಲ ಎಂದಾಗ ಶಾಸಕ ಆಸೀಫ್ ಸೇಠ್ ಅವರು ಕೂಡಲೇ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಪರಿಶೀಲಿಸಬೇಕೆಂದರು. ಇದಕ್ಕೆ ಜಿಲ್ಲಾಧಿಕಾರಿಗಳು 2 ದಿನಗಳ ಸಮಯಾವಕಾಶವನ್ನು ಕೋರಿ, ನಿಯಮಗಳ ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಸ್ಲಂ ನಿರ್ಮೂಲನಾ ಇಲಾಖೆಯ ಅಧಿಕಾರಿಗಳ ಮನೆ ನಿರ್ಮಾಣ ಕಾಮಗಾರಿಗಳ ವಿಳಂಬ ನೀತಿಯನ್ನು ಶಾಸಕ ಆಸೀಫ್ ಸೇಠ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ಲಂ ನಿರ್ಮೂಲನಾ ಇಲಾಖೆಯ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಾರ್ಯಾಲಯಕ್ಕೆ ಬಾರದ ಹಿನ್ನೆಲೆ ಶಾಸಕ ರಾಜು ಕಾಗೆ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳಿಗೆ ಶಿಸ್ತುಬೇಕು. ಸರ್ಕಾರದ ಯೋಜನೆಗಳನ್ನು ಜನರ ತನಕ ತಲುಪಿಸಲು ತಮ್ಮಲ್ಲಿ ಏನು ತೊಂದರೆಯಿದೆ ಎಂದು ಪ್ರಶ್ನಿಸಿದರು. ಸ್ಲಂ ನಿವಾಸಿಗಳಿಗೆ ಶೀಘ್ರದಲ್ಲೇ ಮನೆಗಳನ್ನು ನಿರ್ಮಿಸಿ ಕೊಡಬೇಕೆಂದು ಸೂಚನೆಯನ್ನು ನೀಡಿದರು.