Belagavi

ಹು-ಧಾ ಗೆ ಬೆಳಗಾವಿ ನೀರು ನೀಡಿದ್ರೇ ಉಗ್ರ ಹೋರಾಟ !!!

Share

ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಗಳಿಗೆ ನೀರು ನೀಡದಂತೆ ಮತ್ತು ಮೈಕ್ರೋ ಫೈನಾನ್ಸಗಳ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಮನವಿಯನ್ನು ಸಲ್ಲಿಸಲಾಯಿತು.

ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಗಳಿಗೆ ನೀರು ನೀಡಿದರೇ, ಬೆಳಗಾವಿಯ ನಾಗರೀಕರಿಗೆ ತೊಂದರೆಯುಂಟಾಗಲಿದೆ. ಆಮಿಷಗಳಿಗೆ ಒಳಗಾಗಿ ಸರ್ಕಾರ ಮತ್ತು ಸಚಿವರು ಖಾಸಗಿ ಕಂಪನಿಗಳಿಗೆ ನೀರನ್ನು ನೀಡಲು ಹೊರಟಿದ್ದಾರೆ. ಈಗಾಗಲೇ ಜಿಲ್ಲೆಯ ನವೀಲುತೀರ್ಥ ಜಲಾಶಯದಿಂದಲೂ ನೀರನ್ನು ನೀಡಲಾಗುತ್ತಿದ್ದು, ಈಗ ಮತ್ತೇ ಹಿಡಕಲ್ ಜಲಾಶಯದಿಂದ ನೀರನ್ನು ಪೂರೈಸುತ್ತಿದ್ದಾರೆ. ಕೂಡಲೇ ಈ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಇಲ್ಲದಿದ್ದರೇ, ಉಗ್ರವಾದ ಹೋರಾಟ ನಡೆಸಲಾಗುವುದೆಂದು ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿದರು.

ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಜನರಲ್ಲಿ 5 ಟಿ.ಎಂ.ಸಿ ನೀರನ್ನು ನೀಡಲಾಗುತ್ತಿದೆ ಎಂಬ ತಪ್ಪು ಗ್ರಹಿಕೆ ಉಂಟಾಗಿದೆ. ಆದರೇ ಹಿಡಕಲ್ ಜಲಾಶಯದಲ್ಲಿ ಕುಡಿಯುವ ನೀರನ್ನು ಹೊರತುಪಡಿಸಿ 4 ಟಿ.ಎಂ.ಸಿ ನೀರನ್ನು ಮೊದಲಿನಿಂದಲೂ ಕೈಗಾರಿಕಾ ಪ್ರದೇಶಗಳಿಗಾಗಿ ಮೀಸಲಿಟ್ಟಿದ್ದು, ಜನರಿಗೆ ಯಾವುದೇ ತೊಂದರೆಯುಂಟಾಗುವುದಿಲ್ಲ. ಇನ್ನು ಮೈಕ್ರೋ ಫೈನಾನ್ಸಗಳ ಕಿರುಕುಳವನ್ನು ತಪ್ಪಿಸಲು ಕೂಡ ಈಗಾಗಲೇ ಜಿಲ್ಲಾ ಉಸ್ತುವಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

Tags:

error: Content is protected !!