ಬೆಳಗಾವಿಯಲ್ಲಿ ನಿನ್ನೆ ಫೈನಾನ್ಸನವರ ಕಿರುಕುಳ ತಾಳಲಾರದೇ ಮಹಿಳೆಯೋರ್ವಳು ಭಾವಿಗೆ ಹಾರಿ ಜೀವ ಕಳೆದುಕೊಂಡಿರುವ ಘಟನೆ ತಾಜಾ ಇರುವಾಗಲೇ ಇಂದು ಬೆಳಗಾವಿ ತಾಲೂಕಿನಲ್ಲಿ ಬಾಣಂತಿ ಮತ್ತು ಮಕ್ಕಳು ಸೇರಿದಂತೆ ವೃದ್ಧ ತಂದೆ-ತಾಯಿಯನ್ನು ಬೀದಿಗಟ್ಟಿ ಮನೆ ಸೀಜ್ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ತಾಲೂಕಿನ ತಾರೀಹಾಳ ಗ್ರಾಮದಲ್ಲಿ ಇಂದು ಮತ್ತೇ ಫೈನಾನ್ಸ ಕಂಪನಿಗಳ ಕಿರುಕುಳ ನಡೆದಿದೆ. 5 ಲಕ್ಷ ರೂಪಾಯಿ ಸಾಲ ಪಡೆದಿದ್ದ ಗಣಪತ ಲೋಹಾರ್ ಅವರ ಮನೆಗೆ ಬೆಳ್ಳಂಬೆಳ್ಳಗ್ಗೆ ಬಂದ ಫೈನಾನ್ಸ್ ಸಿಬ್ಬಂದಿ ಮನೆಯವರಿಗೆ ಯಾವುದೇ ವಸ್ತುಗಳನ್ನು ತೆಗೆದುಕೊಳ್ಳಲು ಬಿಡದೇ, ಬಾಣಂತಿ ಮಗಳು, ಆಕೆಯ ನವಜಾತ ಶಿಶು, ಮಕ್ಕಳು ಹಾಗೂ ತಂದೆತಾಯಿ ಸೇರಿದಂತೆ ವೃದ್ಧೆಯನ್ನು ಕೂಡ ಬೀದಿಗಟ್ಟಿ ಮನೆಯನ್ನು ಸೀಜ್ ಮಾಡಿದ್ದಾರೆ.
ಬೆಳ್ಳಂಬೆಳ್ಳಗ್ಗೆ ಏಕಾಏಕಿ ಬಂದವರೇ ಮನೆಯನ್ನು ಸೀಜ್ ಮಾಡಿದ್ದಾರೆ. ಯಾವುದೇ ವಸ್ತುಗಳನ್ನು ಕೂಡ ಮುಟ್ಟಲು ಬಿಟ್ಟಿಲ್ಲ. ಹುಷಾರಿಲ್ಲದ ವೃದ್ಧ ಮಹಿಳೆಯನ್ನು ಕೂಡ ಹೊರಗೆ ಹಾಕಿದ್ದಾರೆ. ಮೊದಲೇ ಅವಧಿಗೂ ಮುನ್ನ ಮಗು ಜನಿಸಿದ್ದು, ಅದರ ಆರೋಗ್ಯಕ್ಕೆ ಸಂಬಂಧಿಸಿದ ಔಷಧಿಗಳು ದಾಖಲೆಗಳನ್ನು ತೆಗೆದುಕೊಳ್ಳಲು 5 ನಿಮಿಷ ಸಮಯ ಕೇಳಿದ್ರೂ ಕೂಡ ನೀಡಿಲ್ಲ. ಚಿಕ್ಕ ಮಗುವಿಗೆ ಹಾಲು ಕುಡಿಸಲು ಹೊಟ್ಟೆಗೆ ಏನು ತಿಂದಿಲ್ಲ. ಚಿಕ್ಕ ಮಕ್ಕಳು ಕೂಡ ಏನು ತಿಂದಿಲ್ಲ. ಮಹಿಳೆಯರೊಂದಿಗೂ ಅಮಾನುಷವಾಗಿ ವರ್ತಿಸಿದ್ದಾರೆ. ಬ್ಯಾಂಕಿಗೆ ಹೋದರೇ, ಸ್ಟೇಟಮೆಂಟ್ ಕೂಡ ನೀಡಲ್ಲ. ಸರ್ಕಾರವೇ ನಮಗೆ ನ್ಯಾಯ ನೀಡಬೇಕೆಂದು ಬಾಣಂತಿ ಮಾಧುರಿ ಕಲ್ಲಪ್ಪ ಬಡಿಗೇರ ಹೇಳಿದ್ರು.
ಬಾಣಂತಿ ಹಾಗೂ ಮಗುವಿಗೆ ಊಟಕ್ಕೆ ನೀಡುತ್ತೇವೆ ಆಮೇಲೆ ಸೀಜ್ ಮಾಡಿ ಅಂದ್ರು ಕೇಳಲಿಲ್ಲ. ಅವಾಚ್ಯವಾಗಿ ನಿಂದಿಸಿ ಮನೆಯಲ್ಲಿನ ವಸ್ತುಗಳನ್ನು ಹೊರಗೆ ಚೆಲ್ಲಿ ಸೀಜ್ ಮಾಡಿದ್ದಾರೆ. ಒಂಟಿ ಹೆಣ್ಣು ಮಕ್ಕಳಿದ್ದರೂ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ನೋಟಿಸ್ ನೀಡದೇ ಬಂದು ಮನೆ ಬಾಗಿಲನ್ನು ಹಾಕಿದ್ದಾರೆ. ಸಮಯಾವಕಾಶ ನೀಡಿ ಮನೆ ಖಾಲಿ ಮಾಡುತ್ತೇವೆಂದರು ಕೇಳಲಿಲ್ಲ. ಬಾಣಂತಿ ಹಾಗೂ ಔಷಧಿಗಳನ್ನು ಕೂಡ ತೆಗೆದುಕೊಳ್ಳಲು ಬಿಡಲಿಲ್ಲ ಎಂದು ಸುವರ್ಣಾ ಲೋಹಾರ್ ಆರೋಪಿಸಿದರು.
ಮೊದಲು ಸಬ್ಸಿಡಿ ಸಾಲವೆಂದು ಹೇಳಿದ್ದರು. ನಾವು 5 ಲಕ್ಷ ರೂಪಾಯಿ ಸಾಲ ಪಡೆದೇವು. ನಂತರ 10 ವರ್ಷ ಕಂತು ತುಂಬಬೇಕೆಂದು ಹೇಳಿ ಅನಕ್ಷರಸ್ಥರಾದ ನಮ್ಮನ್ನು ಮೋಸ ಮಾಡಿದ್ದಾರೆ. ಚಿಕ್ಕ ಮಕ್ಕಳು, ಮಹಿಳೆಯರು ಎಲ್ಲರನ್ನು ಹೊರಗೆ ಹಾಕಿದ್ದಾರೆ. ಈಗಾಗಲೇ 3 ವರೆ ಲಕ್ಷ ರೂಪಾಯಿ ತುಂಬಿದ್ದೇವೆ. ಮತ್ತೇ 7 ಲಕ್ಷ ರೂಪಾಯಿ ಬಾಕಿಯಿದೆ ಎನ್ನುತ್ತಿದ್ದಾರೆ. ಬ್ಯಾಂಕಿನವರು ಮತ್ತು ಪೊಲೀಸರು ಬಂದು ಮನೆಯನ್ನ ಸೀಜ್ ಮಾಡಿದ್ದಾರೆ. ನನಗೂ ಹುಷಾರಿಲ್ಲ. ಮಗಳು ಒಂದು ತಿಂಗಳ ಬಾಣಂತಿ ಈಗ ಹೊರಗೆ ಹಾಕಿದ್ದಾರೆಂದು ಗಣಪತಿ ಲೋಹಾರ್ ಕಣ್ಣೀರು ಹಾಕಿದ್ರು.
ಒಟ್ಟಾರೆ ಫೈನಾನ್ಸ ಕಂಪನಿಗಳ ಕಿರುಕುಳದ ಪ್ರಕರಣಗಳು ಪ್ರತಿದಿನವು ಬೆಳಕಿಗೆ ಬರುತ್ತಿದ್ದು, ಸರ್ಕಾರ ಮಧ್ಯಸ್ಥಿಕೆ ವಹಿಸಿ ಮೋಸ ಹೋದ ಅನಕ್ಷರಸ್ಥರಿಗೆ ಸಹಾಯ ಮಾಡಬೇಕೆಂದು ಆಗ್ರಹಿಸಲಾಗುತ್ತಿದೆ.