ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಂಚನೆ, ಡಕಾಯತಿ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಲೆ ಇವೆ. ದಿನಕ್ಕೆ ಒಂದು ಜನರು ಮೋಸಕ್ಕೆ ಒಳಗಾದ ಪ್ರಕರಣಗಳು ಹೊರ ಬರುತ್ತಿವೆ.ಇದಕ್ಕೆ ಸಾಕ್ಷ ಎನ್ನುವಂತೆ ಚಿಕ್ಕೋಡಿಯಲ್ಲಿ ಕೆ ವೈ ಸಿ ಹೆಸರಲ್ಲಿ ಒ ಟಿ ಪಿ ಪಡೆದು ಬಡ ರೈತನ ಲಕ್ಷಾಂತರ ರೂಗಳನ್ನ ವಂಚಕರು ವಂಚಿಸಿದ್ದಾರೆ. ಬೇರೆ ಅವರಿಗೆ ಒಟಿಪಿ ತಿಳಿಸಿ ಮೋಸ ಹೋಗುವ ಮುನ್ನ ಇಲ್ಲೊಂದು ವರದಿ ಇದೆ ನೋಡಿ.
ಹೀಗೆ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಾ ನಿಂತಿರುವ ಬಡ ರೈತನ ಹೆಸರು ಕುಮಾರ ಬಡಿಗೇರ ಎಂದು.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಂಚನಾಳ ಗ್ರಾಮದ ಈ ರೈತ ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲು ಬ್ಯಾಂಕ್ ಖಾತೆಯಲ್ಲಿ ಇಟ್ಟ ಹಣವನ್ನು ಸೈಬರ್ ಕೈಂ ವಂಚಕರು ಲಪಟಾಯಿಸಿದ್ದಾರೆ. ನಿಮ್ಮ ಖಾತೆಯ ಕೆವೈಸಿ ಮಾಡಬೇಕು ಎಂದು ಒಟಿಪಿ ಪಡೆದು ರೈತನ ಖಾತೆಯಲ್ಲಿದ್ದ 1.5 ಲಕ್ಷ ರೂ. ಹಣ ದೋಚಿದ್ದಾರೆ.ರೈತ ಕುಮಾರ ಬಡಿಗೇರ ಅವರಿಗೆ ಅನಾಮಧೇಯ ಕರೆ ಮಾಡಿ, ನಿಮ್ಮ ಖಾತೆ ಕೆವೈಸಿ ಮಾಡಿಸಬೇಕು. ಇಲ್ಲವಾದರೆ ಖಾತೆ ಸ್ಥಗಿತವಾಗುತ್ತದೆ ಎಂದು ಹೇಳಿ ಒಟಿಪಿ ಪಡೆದು ಚಿಕ್ಕೋಡಿ ಪಟ್ಟಣದ ಕೆನರಾ ಬ್ಯಾಂಕಿನ ಖಾತೆಯಲ್ಲಿದ್ದ 1.5 ಲಕ್ಷ ರೂ ಹಣವನ್ನ ಖದೀಮರು ದೋಚಿದ್ದಾರೆ.ಈ ಕುರಿತು ಬ್ಯಾಂಕಿಗೆ ಅಲೆದಾಡಿ ಅಲೆದಾಡಿ ತಡವಾಗಿ ರೈತ ಪೊಲೀಸರಿಗೆ ದೂರು ನೀಡಿದ್ದಾನೆ.
ಹಣ ಕಳೆದುಕೊಂಡ ಕುಮಾರ ಬಡಿಗೇರ ಅದೇ ದಿನ ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ ಒಟಿಪಿ ಹೇಳಿದ್ದು ನಿಮ್ಮ ತಪ್ಪು ಎಂದು ಬ್ಯಾಂಕಿನ ಅಧಿಕಾರಿ ಹೇಳಿದ್ದಾರೆ. ಇದಾದ ಬಳಿಕ ಪದೇ ಪದೆ ಬ್ಯಾಂಕಿಗೆ ಹೋಗಿ ವಿಚಾರಿಸಿದರೂ ಬ್ಯಾಂಕಿನವರು ಮೋಸಕ್ಕೆ ಹೋದವರಿಗೆ ಸಾಂತ್ವಾನ ಹೇಳುವದು ಬಿಟ್ಟು ಹಾರಿಕೆ ಉತ್ತರ ನೀಡಿ ಕಳಿಸಿದ್ದಾರೆ.ಬ್ಯಾಂಕಿನವರಿಂದ ಯಾವುದೇ ರೀತಿ ಪ್ರಯೋಜನವಾಗದ ಕಾರಣ ರೈತ ನಂತರ ಸೈಬರ್ ಅಪರಾಧ ವಿಭಾಗದ ಸಹಾಯವಾಣಿ 1930 ಸಂಖ್ಯೆಗೆ ದೂರು ದಾಖಲಿಸಿದ್ದಾರೆ. ಇನ್ನೂ ಯಾವುದೇ ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಸೇವೆ ಆರಂಭಿಸಿದ ಕೂಡಲೇ ಮೊದಲ 24 ಗಂಟೆಗಳಲ್ಲಿ 50 ಸಾವಿರ ರೂ. ಹೆಚ್ಚಿನ ಮೊತ್ತ ವರ್ಗಾವಣೆಯಾಗುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಕೇವಲ 3 ನಿಮಿಷದಲ್ಲಿ ಖಾತೆ ಸಕ್ರಿಯಗೊಂಡು 1.5 ಲಕ್ಷ ರೂ ಹಣಕ್ಕೆ ಕನ್ನ ಹಾಕಲಾಗಿದೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಸೈಬರ್ ಕ್ರೈಂ ಜಾಗೃತಿ ತಂಡದ ಸದಸ್ಯರು ಸಂಶಯ ವ್ಯಕ್ತ ಪಡಿಸಿದ್ದಾರೆ.
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಸೈಬರ್ ಕ್ರೈಂ ವಂಚನೆಗಳು ಹೆಚ್ಚಾಗುತ್ತಿವೆ.ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಒ ಟಿ ಪಿ ಹೇಳಿ ವಂಚನೆಗೆ ಒಳಗಾಗುತ್ತಿದ್ದಾರೆ.ಇಂಥ ಮೋಸ ಹೋದವರ ಕಣ್ಣೀರನ್ನಾದರೂ ನೋಡಿ ಜನರು ಜಾಗೃತರಾಗಿ ಮೋಸ ಹೋಗದೇ ಇರಲಿ ಎನ್ನುವದೇ ನಮ್ಮ ಆಶಯ.