ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಅಪಹರಿಸಿ ಊರೂರು ತಿರುಗಾಡಿಸಿ ಹಲ್ಲೆ ಮಾಡಿದ ನಾಲ್ವರು ಆರೋಪಿಗಳನ್ನು ಖಾನಾಪೂರ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 29 ರಂದು ಖಾನಾಪೂರ ತಾಲೂಕಿನ ದೇವಲತ್ತಿ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹೇಶ ಸೀಮನಗೌಡರ (35) ಎಂಬುವವರನ್ನು ಅಪಹರಣ ಮಾಡಲಾಗಿತ್ತು. ಬಳಿಕ ಲೋಕೋಳಿ, ಪಾರಿಶ್ವಾಡ, ಕೊಡಚವಾಡ, ಬಡಸ ಸೇರಿ ವಿವಿಧ ಗ್ರಾಮಗಳಲ್ಲಿ ಸುತ್ತಾಡಿಸಲಾಗಿದೆ. ವಿವಿಧ ಸ್ಥಳಗಳಲ್ಲಿ ಕರೆದುಕೊಂಡು ಪಾರಿಶ್ವಾಡ ಗ್ರಾಮದ ಬಳಿ ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಿದ್ದರು. ಕಿರುಚಾಟವನ್ನು ಕೇಳಿ ಪಾರಿಶ್ವಾಡ ಗ್ರಾಮಸ್ಥರು ಮಹೇಶನನ್ನು ರಕ್ಷಿಸಿದ್ದರು.
ಬಳಿಕ ಪಾರಿಶ್ವಾಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹೇಶ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಬಳಿಕ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡಿ.30ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಾದ ಬಳಿಕ ಪೊಲೀಸರಿಗೆ ಮಹೇಶ್ ದೂರು ನೀಡಿದ್ದಾರೆ. ಮಹೇಶ್ ನೀಡಿದ ದೂರಿನ ಮೇರೆಗೆ ಉತ್ತರ ಕನ್ನಡ ಜಿಲ್ಲೆ ಹಲ್ಯಾಳದ ಲಾಡ್ಜವೊಂದರಲ್ಲಿ ತಂಗಿದ್ದ ಸಂದೀಪ ಚಲವಾದಿ, ರಾಘವೇಂದ್ರ ಚಲವಾದಿ, ಮಾರುತಿ ಕಾಂಬಳೆ ಮತ್ತು ರಾಜಶೇಖರ ಹಿಂಡಲಗಿ ಎಂಬುವರನ್ನು ಬಂಧಿಸಿನಿನ್ನೆ ಖಾನಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.