ಬೆಳಗಾವಿ ತಾಲೂಕಿನ ಸುಳೇಭಾಂವಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮ ಮತ್ತು ಮುಸ್ಲಿಂ ಧರ್ಮದ ಅವಹೇಳನ ಮಾಡಿದ ನಾಝೀಯಾ ಖಾನ್ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಂದು ಮುಸ್ಲಿಂ ಧರ್ಮಗುರು ಮತ್ತು ಅಂಜುಮನ್-ಎ-ಇಸ್ಲಾಂನ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಇಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಮುಸ್ಲಿಂ ಧರ್ಮಗುರು ಮತ್ತು ಅಂಜುಮನ್-ಎ-ಇಸ್ಲಾಂನ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮೌಲಾನಾ ಮುಫ್ತಿ ಮಂಜೂರ್ ರಿಝ್ವಿ ಅವರು ನಾಝಿಯಾ ಇಲಾಹಿ ಖಾನ್ ಇಸ್ಲಾಂ ಧರ್ಮ ಮತ್ತು ಮುಸ್ಲಿಂ ಸಮಾಜದ ಮೇಲೆ ಮಾಡಿದ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಆಕೆಯ ಸಂಪೂರ್ಣ ಭಾಷಣ ನಿರಾಧಾರವಾಗಿದ್ದು, ಅದನ್ನು ನಾವು ಖಂಡಿಸುತ್ತೇವೆ. ಬೆಳಗಾವಿ ನಗರದಲ್ಲಿ ಹಿಂದೂ, ಮುಸ್ಲಿಂ, ಸಿಖ್, ಇಸಾಯಿ ಸೌಹಾರ್ದತೆಯಿಂದ ಸಹಬಾಳ್ವೆಯನ್ನು ನಡೆಸುತ್ತಿದ್ದು, ಬೆಳಗಾವಿಯ ಸೌಹಾರ್ದತೆ ಧಕ್ಕೆಯುಂಟು ಮಾಡುವ ಹೇಳಿಕೆ ನೀಡುವ ಜನರಿಗೆ ನಗರದಲ್ಲಿ ಪ್ರವೇಶವನ್ನು ನೀಡಬಾರದು. ನಾಝಿಯಾ ಇಲಾಹಿ ಖಾನ್ ಮತ್ತು ಸುಳೇಭಾವಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇನ್ನು ಮೌಲಾನಾ ಸಲೀಮ್ ಅವರು ಮಾತನಾಡಿ,ಸುಳೇಭಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊಲಕಾತಾದ ನಾಝಿಯಾ ಇಲಾಹಿ ಖಾನ್ ಇಸ್ಲಾಂ ಧರ್ಮ ಮತ್ತು ಮುಸ್ಲಿಂ ಸಮಾಜವನ್ನು ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾಳೆ. ಆಕೆಯ ವಿರುದ್ಧ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಕ್ರಮಕೈಗೊಳ್ಳಬೇಕು. ಇಂತಹ ಜನರು ಬೆಳಗಾವಿಗೆ ಆಗಮಿಸದಂತೆ ನಿರ್ಬಂಧ ಹೇಳಬೇಕು ಎಂದರು.
ಈ ವೇಳೆ ನೂರಾರು ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು.