ಜೀವಿತಾವಧಿಯಲ್ಲಿಯೂ ಡಾ. ಅಂಬೇಡ್ಕರರನ್ನ ಅವಮಾನಿಸಿದ ಕಾಂಗ್ರೆಸ್ ದಲಿತರು ಮತ್ತು ಹಿಂದುಳಿದವರ ಏಳ್ಗೆಯನ್ನು ಎಂದಿಗೂ ಬಯಸಿಲ್ಲ. ಆದರೇ ಬಿಜೆಪಿ ಆದಿವಾಸಿ ಮಹಿಳೆಗೆ ರಾಷ್ಟ್ರಪತಿಯ ಸ್ಥಾನ ಮತ್ತು ಸಾಮಾನ್ಯ ವ್ಯಕ್ತಿಗೆ ಪಿಎಂ ಸ್ಥಾನ ನೀಡಿ, ಸಂವಿಧಾನವನ್ನು ಮತ್ತು ಅಂಬೇಡ್ಕರರ ಆದರ್ಶಗಳನ್ನು ಸದಾ ಗೌರವಿಸಿದೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ಗುರುಪ್ರಕಾಶ ಪಾಸ್ವಾನ ಅವರು ಹೇಳಿದರು.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಅವರು, ಜೀವಿತಾವಧಿಯಲ್ಲಿ ಡಾ. ಅಂಬೇಡ್ಕರರನ್ನು ಅವಮಾನಿಸಿದ ಕಾಂಗ್ರೆಸನ ನೀತಿಯನ್ನು ಜನರಿಗೆ ತಿಳಿಸುತ್ತೇವೆ. ಅಂಬೇಡ್ಕರ ಭಾವಚಿತ್ರ ಹಾಕಲು ವಿರೋಧ, ಮೀಸಲಾತಿಗೆ ವಿರೋಧ ಹೀಗೆ ಹಲವಾರು ಬಾರಿ ಅಂಬೇಡ್ಕರರನ್ನು ಕಾಂಗ್ರೆಸ್ ಅವಮಾನಿಸಿದೆ. ಆದರೇ ಬಿಜೆಪಿ ಮೊದಲಬಾರಿಗೆ ದೇಶದ ರಾಷ್ಟ್ರಪತಿ ಸ್ಥಾನವನ್ನು ಓರ್ವ ಆದಿವಾಸಿ ಮೂಲದ ಮಹಿಳೆಗೆ ನೀಡಿದೆ. ಸಾಮಾನ್ಯ ಕುಟುಂಬದಿಂದ ಬಂದವರಿಗೆ ಪ್ರಧಾನಿ ಸ್ಥಾನವನ್ನು ಬಿಜೆಪಿ ನೀಡಿದೆ. ಬಿಜೆಪಿ ಸದಾ ಸಂವಿಧಾನವನ್ನು ಗೌರವಿಸಿದೆ ಎಂದರು.
ಬಿಜೆಪಿ ಜಗತ್ತಿನ ಅತಿದೊಡ್ಡ ಪಕ್ಷವಾಗಿದ್ದು, ಸುಮಾರು 15 ಕೋಟಿ ಸದಸ್ಯರನ್ನು ಹೊಂದಿದೆ. ಇದರ ಕಾರ್ಯಕ್ಕೆ ಯಾರು ಪ್ರಮಾಣಪತ್ರ ನೀಡುವ ಅವಶ್ಯಕತೆಯಿಲ್ಲ. ಯಾರೂ ಕೂಡ ಮೀಸಲಾತಿಯನ್ನು ಮುಟ್ಟಲು ಸಾಧ್ಯವಿಲ್ಲ. ಭಾರತೀಯ ಜನರ ಆಶೀರ್ವಾದ ಮತ್ತು ಅವರು ನೀಡಿದ ಪ್ರಮಾಣಪತ್ರ ನಮ್ಮೊಂದಿಗೆ. ಅವರು ತೋರಿಸಿದ ದಾರಿಯಲ್ಲಿ ನಾವು ಕಾರ್ಯನಿರ್ವಹಿಸುತ್ತೇವೆ ಎಂದರು.
ಇನ್ನು ರಾಜ್ಯ ವಕ್ತಾರರಾದ ಅಡ್ವೋಕೇಟ್ ವೆಂಕಟೇಶ್ ದೊಡ್ಡೇರಿ ಅವರು ಭಾರತೀಯ ಜನತಾ ಪಕ್ಷವು ಸದಾ ಸಂವಿಧಾನ ಮತ್ತು ಅದರ ಮೌಲ್ಯಗಳನ್ನು ಗೌರವಿಸಿದೆ. ಡಾ. ಅಂಬೇಡ್ಕರರು ಸದಾ ಹಿಂದುಳಿದವರ ಪರ, ದಲಿತ ಪರ ಮತ್ತು ರಾಷ್ಟ್ರದ ಪರವಾಗಿ ಸಂವಿಧಾನವನ್ನು ಬರೆದಿದ್ದಾರೆ. 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಎಷ್ಟು ಜನ ದಲಿತರು ಮತ್ತು ಹಿಂದುಳಿದವರನ್ನು ಉದ್ಧಾರ ಮಾಡಿದೆ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಒಂದು ಕುಟುಂಬದ ಓಲೈಕೆ ದುಷ್ಟ ಆಡಳಿತವನ್ನು ನಡೆಸಿದೆ ಎಂದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಬಾಪೂಜಿ, ಅಂಬೇಡ್ಕರ ಹಾಗೂ ಸಂವಿಧಾನವನ್ನು ಉಳಿಸಲು ಸಮಾವೇಶವನ್ನು ಮಾಡುತ್ತಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಉಳಿಸಲು ಈ ಕಾರ್ಯಕ್ರಮವನ್ನು ಮಾಡುತ್ತಿದೆ ಎಂದರು.
ಈ ವೇಳೆ ಬಿಜೆಪಿ ಮಹಾನಗರ ಅಧ್ಯಕ್ಷೆ ಗೀತಾ ಸುತಾರ್ ಸೇರಿದಂತೆ ಇನ್ನುಳಿದ ಪದಾಧಿಕಾರಿಗಳು ಉಪಸ್ಥಿತರಿದ್ಧರು