ವಿಜಯಪುರ ನಗರದ ಹೊರ ವಲಯದ ಬಸವ ನಗರದ ಖೇಮು ರಾಠೋಡ ಮಾಲಿಕತ್ವದ ಇಟ್ಟಂಗಿ ಬಟ್ಟಿಯಲ್ಲಿ ಕಾರ್ಮಿಕರ ಮೇಲೆ ನಡೆದ ಹಲ್ಲೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ದೂರವಾಣಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನ ಹೇಳಿದರು. ಮಾಜಿ ಸಚಿವ ಹೆಚ್. ಆಂಜನೇಯ ಭೇಟಿ ಮಾಡಿ ಸಾಂತ್ವನ ಹೇಳುವ ಸಮಯದಲ್ಲಿ ಆಂಜನೇಯ ಇವರು ಸಿಎಂ ಸಿದ್ದರಾಮಯ್ಯ ಇವರಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿದರು. ಸಂಕ್ರಮಣ ಹಬ್ಬಕ್ಕೆ ತಮ್ಮ ಊರುಗಳಿಗೆ ತೆರಳಿ ಕೆಲಸಕ್ಕೆ ಮರಳಿದ್ದ ಕಾರ್ಮಿಕರನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಇಟ್ಟಂಗಿ ಭಟ್ಟಿ ಮಾಲಿಕ ಖೇಮು ರಾಠೋಡ ಮತ್ತು ಇತರರು ಕಾರ್ಮಿಕರ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ಅದನ್ನು ಮೊಬೈಲಿನಲ್ಲಿ ವಿಡಿಯೋ ಕೂಡ ಮಾಡಿಕೊಂಡು ಚಿತ್ರಹಿಂಸೆ ನೀಡಿದ್ದರು. ಈ ಘಟನೆಯಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲ್ಲೆಗೊಳಗಾದ ಕಾರ್ಮಿಕರನ್ನು ವಿಚಾರಿಸಿ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ ದೂರವಾಣಿಯಲ್ಲಿ ಕಾರ್ಮಿಕರನ್ನು ಮಾತನಾಡಿಸಿದರು.

ಈ ವೇಳೆ ಸಿದ್ದರಾಮಯ್ಯ ಕೂಡಾ ಸಾಂತ್ವನ ಹೇಳಿದರು. ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಆಂಜನೇಯ ಕೂಲಿ ಕಾರ್ಮಿಕರಿಗೆ ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿದ್ದಾರೆ. ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ಎರಡು ಎಕರೆ ಜಮೀನು ಕೊಡಿಸುವ ಭರವಸೆ ನೀಡಿದರು. ವಿಡಿಯೋ ಮಾಡಿರೋದು ಖೇದಕರ, ಸಮಾಜ ಎಲ್ಲಿಗೆ ಬರುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮತ್ತಿತರು ಉಪಸ್ಥಿತರಿದ್ದರು.