ಕಳೆದ ಎರಡು ದಿನಗಳ ಹಿಂದೆ ಧಾರವಾಡ ಕೃಷಿ ವಿವಿಯಲ್ಲಿ ನಡೆದಿದ್ದ ಕೃಷಿವಿವಿ ಅಮೃತ ಮಹೋತ್ಸ ಮತ್ತು ಹಳೆ ವಿದ್ಯಾರ್ಥಿಗಳಸಮ್ಮಿಲನ ಕಾರ್ಯಕ್ರಮದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ವೇದಿಕೆಯ ಮೇಲೆ ಮಾತನಾಡಲು ಅವಕಾಶ ನೀಡದೇ ಕುಲಪತಿಗಳ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಕುಲಪತಿಗಳ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಗುರುವಾರದಂದು ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ಜಗದೀಪ ಧನಕರರವರು, ರಾಜ್ಯದ ರಾಜ್ಯಪಾಲರಾದ ಥಾವರ ಚೆಂದ್ ಗೆಹ್ಲೋಟ್ ಭಾಗವಹಿಸಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಪ್ರೋಟೋಕಾಲ್ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮಾತಾಡಲು ಅವಕಾಶ ನೀಡಬೇಕಿತ್ತು.
ಇದನ್ನು ನೀಡದೆ ಉಸ್ತುವಾರಿ ಸಚಿವರಿಗೆ ಈ ಕಾರ್ಯಕ್ರಮದಲ್ಲಿ ಕೃಷಿ ವಿವಿ ಕುಲಪತಿಗಳು ಅಪಮಾನ ಮಾಡಿದ್ದಾರೆ ಎಂದು ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ರವಿ ಮಾಳಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಷ್ಟಾಚಾರ ಪಾಲಿಸದ ಹಿನ್ನೆಲೆಯಲ್ಲಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ಪಿ ಎಸ್ ಪಾಟೀಲರ ಮೇಲೆ ಕ್ರಮ ಕೈಗೊಳ್ಳಬೇಕೆಂದು ರವಿ ಮಾಳಗೇರ ಸರ್ಕಾರಕ್ಕೆ ದೂರು ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ವೇತನ ಪಡೆಯುವ ಕೃಷಿ ವಿ ವಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ವೇದಿಕೆ ಮೇಲೆ ಕರೆದು, ಅವರಿಗೆ ಮಾತನಾಡಲು ಅವಕಾಶ ಕೊಡದೆ ಇರುವದನ್ನು ಮಾಳಗೇರ ಅವರು ಸರ್ಕಾರದ ಗಮನಕ್ಕೆ ತರುವುದರ ಜತೆಗೆ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.