ಸದ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟಕ್ಕೆ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದವರು ಬೇಸರ ವ್ಯಕ್ತಡಿಸಿದ್ದು, ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟರಿಂದ ಲಕ್ಷಾಂತರ ಜನ ಕಾರ್ಯಕರ್ತರಿಗೆ ಬೇಸರ ಉಂಟಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, . ಬಿಜೆಪಿಗಾಗಿ ಹಗಲು, ರಾತ್ರಿ ಲಕ್ಷಾಂತರ ಜನ ಕಾರ್ಯಕರ್ತರು ದುಡಿದಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಬಹಳ ವರ್ಷಗಳಿಂದ ದುಡಿದಿದ್ದಾರೆ. ಪಕ್ಷದ ಸಂಸ್ಥಾಪಕ ಶಾಮ ಪ್ರಸಾದ್ ಮುಖರ್ಜಿ ದೇಶಕ್ಕಾಗಿ ಜೀವ ಕಳೆದುಕೊಂಡಿದ್ದಾರೆ. ಅವರು ಆರ್ಟಿಕಲ್ 370 ವಿರುದ್ಧ ಹೋರಾಡಿದ್ದರು. ದೀನದಯಾಳ ಉಪಾಧ್ಯಾಯ ಅವರ ಕೊಲೆ ಆಯಿತು. ಅವರು ಕೂಡ ದೇಶಕ್ಕಾಗಿ ಪ್ರಾಣ ತೆತ್ತರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲಕ್ಷಾಂತರ ಜನ ಕಾರ್ಯಕರ್ತರು ಜೈಲು ಸೇರಿದ್ದರು. ದೇಶಕ್ಕಾಗಿ ಕುಟುಂಬ, ಆಸ್ತಿ ಪಾಸ್ತಿ ಬಿಟ್ಟು ದುಡಿದಿದ್ದಾರೆ. ಅಂತವರಿಂದ ಬಿಜೆಪಿ ಪಕ್ಷ ಆಗಿದೆ. ಆದರೆ, ಈಗ ಈ ರೀತಿಯ ಜಗಳದಿಂದ ಕಾರ್ಯಕರ್ತರ ಮನಸ್ಸಿಗೆ ನೋವಾಗುತ್ತಿದೆ. ಪಕ್ಷದ ವರಿಷ್ಠರು ಬಹಳ ಬೇಗ ಈ ಜಗಳ ಬಗೆಹರಿಸುತ್ತಾರೆ ಎಂಬ ನಂಬಿಕೆ ಇದೆ. ಪಕ್ಷದ ಹೈಕಮಾಂಡ್ ಮಹಾರಾಷ್ಟ್ರ ಚುನಾವಣೆಯಲ್ಲಿ ಬ್ಯುಸಿ ಇದ್ದರು. ಈಗ ದೆಹಲಿ, ಬಿಹಾರ್ ಚುನಾವಣೆ ಶುರುವಾಗಿದೆ. ಸಂಸತ್ ಅಧಿವೇಶನವೂ ನಡೆದಿದೆ. ಬೇಗನೆ ಕರೆದು ಈ ಜಗಳ ಬಗೆಹರಿಸಬಹುದು. ಇನ್ನೂ ರೇಣುಕಾಚಾರ್ಯ ಮತ್ತು ಯತ್ನಾಳ ಮಧ್ಯೆ ನಡೆದಿರುವ ಟಾಕ್ ವಾರ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾರೇ ಆಗಲಿ ಮಾಧ್ಯಮಗಳ ಮುಂದೆ ಈ ರೀತಿ ಮಾತನಾಡಬಾರದು. ನಾಲ್ಕು ಗೋಡೆಗಳ ಮಧ್ಯೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅದಕ್ಕೆ ಪೂರಕ ವಾತಾವರಣವನ್ನು ಹೈಕಮಾಂಡ್ ಮಾಡಿಕೊಡುತ್ತದೆ ಎಂದು ತಿಳಿಸಿದರು.