ವಿಧಾನ ಪರಿಷತ್ತಿನಲ್ಲಿ ಇಂದು ಪಂಚಮಸಾಲಿ ಹೋರಾಟದ ಕಾರ್ಯದ ಮೇಲೆ ನಡೆದ ಲಾಠಿ ಪ್ರಹಾರ ವಿಷಯ ಪ್ರತಿಧ್ವನಿಸಿತು. ವಿಧಾನ ಪರಿಷತ್ತಿನಲ್ಲಿ ಇಂದು ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಹಾಗೂ ಹೋರಾಟಗಾರರ ಮೇಲೆ ನಡೆದ ಹಲ್ಲೆಯನ್ನ ಖಂಡಿಸಿ ಸದನದ ಭಾವಿಗಿಳಿದು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು.
ಆದರೆ ಸಭಾಪತಿಗಳು ಈ ವಿಷಯವನ್ನು ಚರ್ಚಿಸಲು ಅವಕಾಶ ನೀಡದೆ, ಹೊಸ ವಿಷಯವನ್ನು ಚರ್ಚಿಸಲು ಅವಕಾಶ ಮಾಡಿಕೊಡುತ್ತಿದ್ದಂತೆ, ತಮಗೆ ಸಮರ್ಪಕ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಧಿಕ್ಕಾರವನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶೂನ್ಯ ವೇಳೆಯಲ್ಲಿ ಬಿಜೆಪಿಯ ಸದಸ್ಯ ಹನಮಂತ ನಿರಾಣಿ ಅವರು ಪಂಚಮಸಾಲಿ ಸಮಾಜ ಕಳೆದ 32 ವರ್ಷಗಳಿಂದ ೨ ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದೆ. ಡಿಸೆಂಬರ 10 ರಂದು ಈ ಬಗ್ಗೆ ಪಂಚಮಸಾಲಿ ಸಮಾಜದ ಸ್ವಾಮಿಜೀಗಳ ನೇತೃತ್ವದಲ್ಲಿ ನ್ಯಾಯಯುತ ಹೋರಾಟ ನಡೆಸುತ್ತಿದ್ದಾಗ ಸರಕಾರ ಏಕಾಏಕಿ ಲಾಠಿಚಾರ್ಜ ನಡೆಸಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದೆ. ಪೋಲಿಸರ ದಾಳಿಯಿಂದಾಗಿ ಹಲವರಿಗೆ ಗಂಭಿರ ಗಾಯಗಳಾಗಿವೆ. ಈ ಘಟನೆಯನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಉತ್ತರಿಸಿ ಪಂಚಮಸಾಲಿ ಮೀಸಲಾತಿ ಹೋರಾಟ ಹೊಸದೆನಲ್ಲ. ಸಮೂದಾಯದ ಹೋರಾಟವನ್ನು ನಾವು ಗಂಭೀರವಾಗಿ ಪರಿಗಣಿಸಿ ಅವಕಾಶ ನೀಡದ್ದೇವೆ. ರಾಜ್ಯದ ನಾಲ್ವರು ಸಚಿವರನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ ಸಮೂದಾಯದ ಮುಖಂಡರ ಜತೆ ಮಾತುಕತೆಗೆ ಕಳುಹಿಸಲಾಗಿತ್ತು. ಆದರೆ ಅವರು ಮುಖ್ಯಮಂತ್ರಿಗಳೇ ಪ್ರತಿಭಟನಾ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದು ಸರಿಯಾದ ಕ್ರಮವಲ್ಲ.
ಪಂಚಮಸಾಲಿ ಸಮೂದಾಯದವರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿ ಬ್ಯಾರಿಕೆಡ ಬಿಸಾಕಿ ಪೋಲಿಸರಿಗೆ ಕಲ್ಲು ತೂರಿದ್ದರಿಂದ ಈ ಘಟನೆ ನಡೆದಿದೆ.
ಹೋರಾಟಗಾರರು ಕಾನೂನು ಕೈಗೆತ್ತಿಕೊಂಡಿದ್ದರಿಂದ ಅನಿವಾರ್ಯವಾಗಿ ಪೋಲಿಸರು ಲಾಠಿ ಚಾರ್ಜ ಮಾಡಬೇಕಾಯಿತು ಎಂದು ಸಮರ್ಥಿಸಿಕೊಂಡರು. ಅಲ್ಲದೆ ಲಾಠಿ ಚಾರ್ಜ ಮಾಡಿದ್ದಲ್ಲಿ ಪೋಲಿಸರ ತಪ್ಪಿದ್ದರೆ ಕ್ಷಮೆ ಕೇಳುತ್ತೆವೆ. ಆದರೆ ಹೋರಾಟಗಾರರು ತಾವೇ ಮೋದಲು ನಿಯಮ ಉಲ್ಲಂಘಿಸಿ ಕಲ್ಲು ಚಪ್ಪಲಿ ತೂರಿದ್ದ ಬಗ್ಗೆ ನಮ್ಮ ಬಳಿ ವಿಡಿಯೋ ಸಾಕ್ಷಿಗಳಿವೆ ಎಂದು ಹೇಳಿದರು.