ಶುಚಿತ್ವ ಮತ್ತು ಆರೋಗ್ಯ ಪರಸ್ಪರ ಸಂಬಂಧ ಹೊಂದಿರುವುದರಿಂದ ನೀವು ಶುದ್ಧವಾಗಿದ್ದರೆ ನೀವು ಅನೇಕ ಸಾಂಕ್ರಾಮಿಕ ರೋಗಗಳಿಂದ ಹೋರಾಡಬಹುದು ಮತ್ತು ತಡೆಗಟ್ಟಬಹುದು ಎಂದು ಲಾಡಲಿ ಫೌಂಡೇಶನ್ ಟ್ರಸ್ಟಿನ ರಾಯಭಾರಿ ಶಿಫಾ ಜಮಾದಾರ ಹೇಳಿದರು.
ವಿಜಯಪುರ ಜಿಲ್ಲೆಯ ತಿಕೋಟಾ ಗ್ರಾಮದ ಕೆ.ಬಿ.ಎಂ.ಪಿ.ಎಸ್. ಬಾಲಕರ ಸರಕಾರಿ ಶಾಲೆಯಲ್ಲಿ ಲಾಡಲಿ ಫೌಂಡೇಶನ ಟ್ರಸ್ಟ ವತಿಯಿಂದ ತಿಕೋಟಾ, ಬಬಲೇಶ್ವರ, ತಾಜಪೂರ ಸರಕಾರಿ ಶಾಲೆಗಳ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಾಗೂ ಸದಸ್ಯರಿಗೆ ಸ್ವಚ್ಚತಾ ತರಬೇತಿ ಹಾಗೂ ಸ್ವಚ್ಚತಾ ಕಿಟ್ಟ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸುಚಿತ್ವವು ನಿಮ್ಮ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಸ್ವಚ್ಚತೆಯಿಂದ ಇರುವುದು ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ. ಅಸಮರ್ಪಕ ಕುಡಿಯುವ ನೀರು ನೈರ್ಮಲ್ಯದ ಮೇಲೆ ಪರಿಣಾಮವಾಗಿ ಅನೇಕ ರೋಗಗಳಿಗೆ ಹಾಗೂ ಸಾವಿಗೆ ಕಾರಣವಾಗುತ್ತಿದೆ. ಸ್ವಚ್ಚವಾದಂತಹ ನೀರನ್ನು ಪ್ರತಿ ವಿದ್ಯಾರ್ಥಿ ಬಳಸುವುದನ್ನು ರೂಢಿಸಿಕೊಳ್ಳಬೇಕು. ಲಾಡಲಿ ಫೌಂಡೇಶನ ಟ್ರಸ್ಟ ವಿಜಯಪುರ ಜಿಲ್ಲೆಯ ೨೧ ಸರಕಾರಿ ಶಾಲೆಯಲ್ಲಿ ಹೊಸದಾಗಿ ಅತ್ಯಾಧುನಿಕ ಶೌಚಾಲಯ ಕಟ್ಟುತ್ತಿದೆ.
ಇದರ ಜೊತೆಗೆ ಒಂದು ವರ್ಷದ ಅವಧಿವರೆಗೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಾನಿಟ್ರಿ ಪ್ಯಾಡಗಳನ್ನು ಪೂರೈಸುತ್ತಿದೆ. ಮತ್ತು ೨೧ ಶಾಲೆ ಮಕ್ಕಳಿಗೆ ಇದೇ ಡಿಸೆಂಬರ ಕೊನೆಯ ವಾರದಲ್ಲಿ ೪೦೦೦ ಶಾಲಾ ಬ್ಯಾಗಗಳನ್ನು ಉಚಿತವಾಗಿ ಹಂಚುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ತಿಪ್ಪಣ್ಣ ಕೊಣ್ಣೂರ ವಹಿಸಿದ್ದರು. ತಿಕೋಟಾ ತಾಲೂಕ ಪಂಚಾಯತ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಪಿ.ಕೆ.ಪಿ.ಎಸ್. ತಿಕೋಟಾ ಉಪಾಧ್ಯಕ್ಷ ಹಾಜಿಭಾಯಿ ಕೊಟ್ಟಲಗಿ, ಲಾಡಲಿ ಫೌಂಡೇಶನ ಟ್ರಸ್ಟದ ಜಿಲ್ಲಾ ವ್ಯವಸ್ಥಾಪಕ ಯುಸೂಫ ಕೊಟ್ಟಲ, ಮುಖ್ಯೋಧ್ಯಾಪಕ ವಾಯ್.ಬಿ. ವಾಲಿಕಾರ, ಎಸ್.ಎಸ್. ಸಾಲಿಮಠ, ಹುಸೇನಬಾಶಾ ಮುಲ್ಲಾ, ಬಿ.ವಾಯ್. ಮೆಂಡೆಗಾರ, ಪ್ರೀತಿ ಪತ್ತಾರ, ಸರಿತಾ ಚಕ್ರಸಾಲಿ ಉಪಸ್ಥಿತರಿದ್ದರು.