ಬೆಳಗಾವಿ ಹಿಂದೂಸ್ತಾನದ ಅವಿಸ್ಮರಣೀಯ ಸ್ಥಳ. ಸ್ವಾತಂತ್ರ್ಯ ಸಂಗ್ರಾಮದ ರಣಕಹಳೆಯನ್ನು ಮಹಾತ್ಮ ಗಾಂಧಿಜೀಯವರು ಇಲ್ಲಿಂದಲೇ ಊದಿದ್ದರು ಎಂದು
ಎಐಸಿಸಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದರು.
ಅವರು ಇಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಬೆಳಗಾವಿಯಲ್ಲಿ ಭೂತ,ವರ್ತಮಾನ ಮತ್ತು ಭವಿಷ್ಯಕಾಲದ ಮಿಶ್ರಣ ಕಾಲ ಸಿಗಲಿದೆ. ಬೆಳಗಾವಿ ಹಿಂದೂಸ್ಥಾನದ ಇತಿಹಾಸದ ಒಂದು ಅವಿಭಾಜ್ಯ ಭಾಗವಾಗಿದೆ. ಭಾರತದ ಸ್ವಾತ್ರಂತ್ರ್ಯ ಸಂಗ್ರಾಮಕ್ಕೆ ಬೆಳಗಾವಿಯ ಅಧಿವೇಶನದಿಂದ ಒಂದು ಹೊಸ ದಿಕ್ಕು ಮತ್ತು ದಿಸೆ ದೊರೆಯಿತು. ಬ್ರಿಟಿಷರ ವಿರುದ್ಧ ಮಹಾತ್ಮಾ ಗಾಂಧಿಜೀಯವರು ಬೆಳಗಾವಿಯಿಂದಲೇ ರಣಕಹಳೆಯನ್ನು ಊದಿದ್ದರು. ಜಾತಿ-ಧರ್ಮದ ಬೇಧಭಾವವನ್ನು ತೊಡೆದು ಸಂಪೂರ್ಣ ದೇಶವನ್ನು ಒಂದುಗೂಡಿಸಿ ಸತ್ಯಾಗ್ರಹಕ್ಕೆ ಇಲ್ಲಿಂದಲೇ ಪ್ರೇರೆಪಿಸಿದ್ದಾರೆ.
ಈಗ ಮತ್ತೊಮ್ಮೆ 100 ವರ್ಷದ ಬಳಿಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ ಸಮಿತಿಯ ಸಭೆ ಮತ್ತು ಸಮಾಜವನ್ನು ಮತ್ತೊಮ್ಮೆ ಸಮಾಜವನ್ನು ಒಗ್ಗೂಟಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಪ್ರಮುಖರಾದ ರಾಹುಲ್ ಗಾಂಧಿ, ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಒಂದೆಡೇ ಬಿಜೆಪಿ ಮತ್ತು ಗೃಹ ಸಚಿವ ಅಮೀತ್ ಶಾಹ ಡಾ.ಬಾಬಾಸಾಹೇಬ್ ಅಂಬೇಡ್ಕರ ಹಾಗೂ ಸಂವಿಧಾನವನ್ನು ಅವಮಾನಿಸುತ್ತಿದ್ದಾರೆ. ಇನ್ನೊಂದೆಡೆ ಬೆಳಗಾವಿಯ ಈ ಅಧಿವೇಶನ ಭಾರತದೇಶವು ಸಂವಿಧಾನದ ಮಾರ್ಗದಲ್ಲಿ ನಡೆಯಲಿದೆ ಎಂದು ಸಂಕಲ್ಪ ಕೈಗೊಳ್ಳಲಿದೆ ಎಂದರು.
ರಾಹುಲ್ ಗಾಂಧಿ ಡ್ರಗ್ ಏಡಿಕ್ಟ್ ಆಗಿದ್ದಾರೆಂದು ವಿಪಕ್ಷಿಯರು ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಕೆಲ ಜನರು ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ಅವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರರ ಅವಹೇಳನ ಮಾಡಿ ಸಂವಿಧಾನದ ಮೇಲೆ ಬುಲ್ಡೋಜರ್ ಹರಿಸುವ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರರ ಹೆಸರನ್ನು ಕೂಡ ಬಾಬಾಸಾಹೇಬ್ ಅಂಬೇಡ್ಕರ ಎಂದು ಗೌರವಯುವಾಗಿ ತೆಗೆದುಕೊಳ್ಳುತ್ತೇವೆ. ಅದೇ ರೀತಿ ಅಮೀತ್ ಶಾಹ ಅವರ ಹೆಸರನ್ನು ತೆಗೆದುಕೊಳ್ಳುವಾಗ ನಾವು ಶ್ರೀ ಅಮೀತ ಶಾಹ ಎಂದು ಗೌರವಪೂರ್ವಕವಾಗಿ ತೆಗೆದುಕೊಳ್ಳುತ್ತೇವೆ. ದೇಶದ ವಿಶ್ವಮಾನ್ಯ ಸಂವಿಧಾನವನ್ನು ರಚಿಸಿದವರನ್ನೇ ಅವಹೇಳನ ಮಾಡುವ ಅವರು ಖರ್ಗೆ ಮತ್ತು ರಾಹುಲ್ ಗಾಂಧಿಯವರನ್ನು ಟೀಕಿಸದೇ ಇರುತ್ತಾರೆಯೇ? ಎಂದು ಪ್ರಶ್ನಿಸಿದರು. ಮಹಾತ್ಮಾ ಗಾಂಧಿಜೀಯವರನ್ನು ಇದೇ ವಿಚಾರವಾದಿ ಶಕ್ತಿಗಳು ಹತ್ಯೆಗೈದಿದ್ದವು. ಜೀವಿತಾವಧಿಯಲ್ಲಿಯೂ ಅವರನ್ನು ಇದೇ ಶಕ್ತಿಗಳು ವಿರೋಧಿಸಿದ್ದವು. ಮಹಾತ್ಮಾ ಗಾಂಧಿಜೀಯವರು ಸೋಲನ್ನು ಸ್ವೀಕರಿಸಿಲ್ಲ. ರಾಹುಲ್ ಗಾಂಧಿ ಕೂಡ ಸ್ವೀಕರಿಸುವುದಿಲ್ಲ ಎಂದರು.
ಬಿಜೆಪಿ ಪ್ರತಿಬಾರಿಯೂ ಈ ದೇಶದ ನಾರಿಯರನ್ನು ಅಪಮಾನಿಸುತ್ತಿದೆ. ಬಿಜೆಪಿಯ ಸಿದ್ಧಾಂತವೇ ಮಹಿಳೆಯರ, ಯುವಕರ, ದಲಿತರ, ಮತ್ತು ಹಿಂದುಳಿದವರ ವಿರೋಧವಾಗಿದೆ. ಈಗ ಮತ್ತೊಮ್ಮೆ ಮಹಿಳಾ ನಾಯಕಿಯನ್ನು ಹೊಲಸು ಶಬ್ದ ಬಳಸಿ ಬಿಜೆಪಿ ನಾಯಕರು ಅಪಮಾನಿಸಿದ್ದಾರೆ. ರಾಜ್ಯ ಸರ್ಕಾರ ಇಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.