ಅಥಣಿ: ರಾಜ್ಯದಲ್ಲಿ ವಕ್ಫ್ ಸದ್ದು ಮಾಡುತ್ತಿದ್ದು, ಇದು ಬಡ ರೈತರಿಂದ ರಾಜಕೀಯ ನಾಯಕರ ಮನೆ ಬಾಗಿಲಿಗೂ ಬಂದು ನಿಂತಿದೆ. ಚಿಕ್ಕೋಡಿ ಮಾಜಿ ಸಂಸದ ಅನ್ನಾಸಾಬ ಜೊಲ್ಲೆ ಕುಟುಂಬಕ್ಕೆ ವಕ್ಸ್ ಶಾಕ್ ನೀಡಿದ್ದರೆ, ಈಗ ಕಾಗವಾಡ ಅಥಣಿ ತಾಲೂಕಿನ ರೈತರಿಗೆ ಕಂಟಕವಾಗಿ ಪರಿಣಮಿಸಿದೆ.
ತಾಲೂಕಿನ ಶಿರಹಟ್ಟಿ ಗ್ರಾಮದ ರೈತ ಬಸವರಾಜ ಕೋಹಳ್ಳಿ ಅವರ 5.12 ಗುಂಟೆ ಜಮೀನು ವಕ್ಫ್ ಹೆಸರಿಗೆ ಹೋಗಿದ್ದು, ಇನ್ನುಳಿದ 2.20 ಗುಂಟೆ ಜಮೀನಿನ ಪಹಣಿಯಲ್ಲೂ ವಕ್ಫ್ ಹೆಸರು ಉಲ್ಲೇಖವಾಗಿದೆ! ಇದರಿಂದ ಕಂಗಾಲಾದ ರೈತನಿಗೆ ದಿಕ್ಕೇ ತೋಚದಂತಾಗಿದೆ.
ಅಷ್ಟೇ ಅಲ್ಲದೆ, ತಾಲೂಕಿನ ಅನಂತಪುರ ಗ್ರಾಮದ 9 ಮಂದಿ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದೆ. ಗ್ರಾಮದ ಸುರೇಖಾ ಸಿದ್ದು ಮೈತ್ರಿ, ಅರ್ಜುನ ಮೈತ್ರಿ, ದತ್ತು ಮೈತ್ರಿ, ಬಾಬು ಮೈತ್ರಿ, ರಾಯಗೊಂಡ ಮೈತ್ರಿ, ಸಂಬಾಜಿ ಮೈತ್ರಿ, ಅನಿಲ ಮೈತ್ರಿ, ಮಹಾದೇವ ಮೈತ್ರಿ, ಭೀಮು ಮೈತ್ರಿ ಎಂಬ ರೈತರ ಜಮೀನಿನಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖವಾಗಿದ್ದು, ರೈತರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.