ಗದಗ ಜಿಲ್ಲೆ ಕಪ್ಪತಗುಡ್ಡದ 80 ಸಾವಿರ ಎಕರೆ ಅರಣ್ಯ ಪ್ರದೇಶವನ್ನು ಸಂರಕ್ಷಿತ ಜೀವ ವೈವಿಧ್ಯತಾ ತಾಣವನ್ನಾಗಿ ವಿಸ್ತರಿಸುವುದು ಮತ್ತು ಅದರ ಪರಿಧಿಯ 10 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಕೈಗೊಳ್ಳದಂತೆ ಸರಕಾರ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಗದಗ ಕಪ್ಪದ ಗುಡ್ಡ ಶ್ರೀ ನಂದಿವೇರಿ ಸಂಸ್ಥಾನಮಠದ ಶ್ರೀ ಶಿವಕುಮಾರ ಸ್ವಾಮೀಜಿ ನೇತೃತ್ವದ ನಿಯೋಗ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಕಪ್ಪತಗುಡ್ಡದ ಸಂರಕ್ಷಣಾ ವಿಷಯದಲ್ಲಿ ರಾಜ್ಯ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ನಾವು ವಿರೋಧಿಸುತ್ತ ಬಂದಿದ್ದೇವೆ. ಕಪ್ಪತಗುಡ್ಡದ ನೆಲ,ಜಲ ಜಾನುವಾರುಗಳು ಹಾಗೂ ಜೀವ ವೈವಿಧ್ಯತೆಗಳ ಸಂರಕ್ಷಣೆಗಾಗಿ ಬದ್ಧವಿರಬೇಕಿದ್ದ ಸರಕಾರ ಹಿಂಬದಿಯಿಂದ ಗಣಿಗಾರಿಕೆಗೆ ಅವಕಾಶ ನೀಡುವ ಹುನ್ನಾರದೊಂದಿಗೆ ನೀತಿ ರೂಪಿಸಿ ಜನಸಾಮಾನ್ಯರ ಕಣ್ಣು ಒರೆಸುವ ತಂತ್ರ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.
ಗದಗ ಜಿಲ್ಲೆಯ ವಿವಿಧ ಮಠಾಧೀಶರು, ಕನ್ನಡ ಹೋರಾಟಗಾರ ಒತ್ತಡಕ್ಕೆ ಮಣಿದ ಸರಕಾರ ಕಪ್ಪತಗುಡ್ಡದ ಕೆಲವೇ ಭಾಗವನ್ನು ಜೀವ ವೈವಿದ್ಯತಾ ತಾಣವೆಂದು ಘೋಷಿಸಿ ಮುಜುಗರದಿಂದ ಪಾರಾಗಲು ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಇಲ್ಲಿಯವರೆಗೂ ಸುಮ್ಮನೆ ಇದ್ದ ಸರಕಾರ ಮತ್ತೇ ಹಳೆ ಚಾಳಿಯನ್ನು ಮುಂದುವರೆಸಿದ್ದು, ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ರತ್ನಗಂಬಳಿ ಹಾಸುತ್ತಿರುವುದು ದೊಡ್ಡ ದುರಂತವಾಗಿದೆ. ಕಪ್ಪತಗುಡ್ಡದ ಸಂರಕ್ಷಣೆಗೆ ಜಾಗೃತ ಸಮಾಜ ಟೊಂಕ ಕಟ್ಟಿ ನಿಂತಿದೆ. ಸರಕಾರ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ್ದಾರೆ.
ಪರಿಸರ ಪ್ರೇಮಿ ಶಿವಾಜಿರಾವ್ ಕಾಗಣಿಕರ, ಸವಿತಾ ಶಿಂಧೆ, ಪ್ರಮೋದಾ ವಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.