ಬೆಳಗಾವಿಯ ವಡ್ಡರವಾಡಿ ಗ್ಯಾಂಗವಾಡಿಯಲ್ಲಿ ವಿವಾಹಿತ ಮಹಿಳೆ ಹಾಗೂ ಆಕೆಯ ತಾಯಿಯ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ ಮೂವರು ಆರೋಪಿಗಳಿಗೆ ಬೆಳಗಾವಿ 2ನೇ ಜೆಎಂ ಎಸ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪಂಕಜಾ ಕೊನ್ನೂರ ಮಂಗಳವಾರದ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಬೆಳಗಾವಿಯ ವಡ್ಡರವಾಡಿ ಗ್ಯಾಂಗವಾಡಿಯಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದಾಳೆ ಎಂದು ಆರೋಪಿಸಿ ವಿವಾಹಿತ ಮಹಿಳೆ ಹಾಗೂ ಆಕೆಯ ತಾಯಿಯ ಬಟ್ಟೆಯನ್ನು ಹರಿದು ಆರೋಪಿಗಳಾದ ಇಂದ್ರಾ ಅಷ್ಟೇಕರ್, ಹೂವಪ್ಪ ಅಷ್ಟೇಕರ್ ಹಾಗೂ ಮಣಿಕಂಠ ಅಷ್ಟೇಕರ್ ಹಲ್ಲೆ ನಡೆಸಿದ್ದರು. ಇವರನ್ನು ಬಂಧಿಸಿದ್ದ ಮಾಳಮಾರುತಿ ಪೊಲೀಸರು ಶನಿವಾರ ರಾತ್ರಿ ಬೆಳಗಾವಿ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದರು.
ಆರೋಪಿಗಳ ಪರ ನ್ಯಾಯವಾದಿ ಸುಮೀತಕುಮಾರ ಅಗಸಗಿ ಜಾಮೀನು ಅರ್ಜಿ ಸಲ್ಲಿಸಿ ವಕಾಲತ್ತು ವಹಿಸಿದ್ದರು. ಮೂವರು ಆರೋಪಿಗಳನ್ನು ಮೂರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನೆಲೆಯಲ್ಲಿ ಮೂವರನ್ನು ಹಿಂಡಲಗಾ ಕಾರಾಗ್ರಹಕ್ಕೆ ಮಾಳಮಾರುತಿ ಪೊಲೀಸರು ರವಾನೆ ಮಾಡಿದರು.
