hubbali

ರಾಜ್ಯದ ರಾಜಧಾನಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯಸರ್ಕಾರ ಮುಂದಾಗಿರೋದು ಸ್ವಾಗತರ್ಹ: ಶಾಸಕ ಅರವಿಂದ ಬೆಲ್ಲದ್

Share

ರಾಜ್ಯದ ರಾಜಧಾನಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯಸರ್ಕಾರ ಮುಂದಾಗಿರೋದು ಸ್ವಾಗತರ್ಹ, ಆದರೆ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರು- ಶಿರಾ ಭಾಗದಲ್ಲಿ ಆಗಬೇಕು ಎಂದು ಶಾಸಕ ಅರವಿಂದ ಬೆಲ್ಲದ್ ಒತ್ತಾಯಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಹಳಷ್ಟು ಯಶಸ್ವಿಯಾಗಿದೆ. ಆದರೆ ಈ ಏರ್ಪೋರ್ಟ್ ಕರ್ನಾಟಕ ಹಾಗೂ ಆಂದ್ರದ ಗಡಿಭಾಗದಲ್ಲಿರುವ ಕಾರಣ ಇದರ ಸದುಪಯೋಗವನ್ನು ಹೆಚ್ಚಾಗಿ ಆಂಧ್ರಪ್ರದೇಶದ ಸರ್ಕಾರ ಪಡೆಯುತ್ತಿದೆ ಎಂದರು.

ಹೊಸೂರು ಭಾಗದಲ್ಲಿ ನಿರ್ಮಾಣ ಮಾಡಲಾದ ಇಂಡಸ್ಟ್ರಿಯಲ್ ಏರಿಯಾ ರಾಜ್ಯಕ್ಕಿಂತ ಹೆಚ್ಚಾಗಿ ತಮಿಳುನಾಡಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಹಾಗಾಗಿ ಇದೀಗ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಹೊಸ ವಿಮಾನ ನಿಲ್ದಾಣಕ್ಕೆ ಈಗಾಗಲೇ ಐದಾರು ಕಡೆಗೆ ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಅಭಿವೃದ್ಧಿ ದಿಸೆಯಲ್ಲಿ ತುಮಕೂರು-ಶಿರಾ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದಲ್ಲಿ ಸೂಕ್ತ ಎಂದು ಹೇಳಿದರು.

ಡಿ.9 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಲಾಗುವುದು. ಇದರೊಂದಿಗೆ ಕಳೆದ ಭಾರಿ ಅಧಿವೇಶನದಲ್ಲಿ ನಡೆಸಿದ ಚರ್ಚೆ ನಡೆಸಿ ತೆಗೆದುಕೊಂಡ ನಿರ್ಧಾರಗಳನ್ನು ಪಟ್ಟಿಮಾಡಿ ಅವುಗಳಲ್ಲಿ ಎಷ್ಟು ಜಾರಿಯಾಗಿವೆ ಎಂಬುದನ್ನು ಸಿಎಂ ಜನರಿಗೆ ತಿಳಿಸಬೇಕು ಎಂದರು.

ಅದರಂತೆ ಈ ಭಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಗಳಾಗಬೇಕು. ಉತ್ತಮ ಕರ್ನಾಟಕ ಭಾಗಕ್ಕೆ ಯಾವುದೇ ಒಂದು ಯೋಜನೆ ತರಬೇಕಾದರೇ ಹೋರಾಟ ಮಾಡಿ ತರುವ ಪರಿಸ್ಥಿತಿ ಇಂದಿಗೂ ಮುಂದುವರೆದಿದೆ. ಇದು ದುರ್ದೈವದ ಸಂಗತಿ ಎಂದು ತಿಳಿಸಿದರು.

ಶಿಗ್ಗಾಂವಿ-ಸವಣೂರು ವಿಧಾನಸಭಾ ಮತಕ್ಷೇತ್ರದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತಗೆ ಟಿಕೆಟ್ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಬಿಜೆಪಿ ಎಂದಿಗೂ ವಂಶ ಪಾರಂಪರಿಕ ಪಕ್ಷವಲ್ಲ. ನಮ್ಮದು ಪ್ರಜಾಪ್ರಭುತ್ವ ಸಿದ್ದಾಂತದ ಅಡಿಯಲ್ಲಿ ಕೆಲಸ ಮಾಡುವ ಪಕ್ಷ. ಅಲ್ಲಿನ ಜನರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಭರತ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿ, ಅಲ್ಲಿ ಎನ್.ಡಿ.ಎ ಅಭ್ಯರ್ಥಿಯಾಗಿ ಸಿ.ಪಿ‌.ಯೋಗೇಶ್ವರ ಸ್ಪರ್ಧೆ ಮಾಡಿದ್ರೆ ಉತ್ತಮ. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಎಚ್ಡಿಕೆ ಅವರು ಈ ವಿಷಯದಲ್ಲಿ ಅತಿಹೆಚ್ಚು ಜ್ಞಾನ ಹೊಂದಿದ್ದು, ಈ ಬಾರಿಯ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ ಅವರಿಗೆ ಟಿಕೆಟ್ ಬಿಟ್ಟು ಕೊಟ್ಟರೆ ಒಳ್ಳೆಯದು ಎಂದರು.

ಹಳೇಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು 17 ಬಾರಿ ಜಾಮೀನಿಗಾಗಿ ಸಲ್ಲಿಸಿದ ಅರ್ಜಿಗಳು ತಿರಸ್ಕೃತಗೊಂಡಿವೆ. ಇಂತಹ ಪ್ರಕರಣವನ್ನು ಸರ್ಕಾರ ಹಿಂಪಡೆಯುವ ಮೂಲಕ ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಗೆ ಯಾವ ಸಂದೇಶ ನೀಡಲು ಹೊಂಟಿದ್ದಾರೆ ಎಂಬುದು ನನಗೆ ತಿಳಿಯುತ್ತಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ್ ಪ್ರಶ್ನೆ ಮಾಡಿದರು.

Tags:

error: Content is protected !!