ಚಿಕ್ಕೋಡಿ: ಹತ್ತು ದಿನಗಳಿಂದ ಗಣೇಶ ನಗರದಲ್ಲಿ ಕುಡಿಯುವ ನೀರು ಸರಬರಾಜು ಮಾಡದೆ ಇರುವ ಹಿನ್ನಲೆಯಲ್ಲಿ ರೊಚ್ಚಿಗೆದ್ದ ರೈತ ಸಂಘಟಣೆಯ ಮುಂದಾಳತ್ವದಲ್ಲಿ ಮಹಿಳೆಯರು ಗ್ರಾಪಂ ಎದರು ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದ ಘಟನೆ ನಿಪ್ಪಾಣಿ ತಾಲೂಕಿನ ಡೋಣೆವಾಡಿ ಗ್ರಾಮದಲ್ಲಿದು ನಡೆದಿದೆ.
ಕಳೆದ 10 ದಿನಗಳಿಂದ ಡೋಣೆವಾಡಿ ಗ್ರಾಮದ ಗಣೇಶ ನಗರದಲ್ಲಿ ನೀರು ಸರಬರಾಜು ಮಾಡಿಲ್ಲಾ, ಇದರಿಂದಾಗಿ ಕುಡಿಯುವ ನೀರಿಗಾಗಿ ಸುತ್ತಾಡುವ ಪ್ರಸಂಗ ಬಂದೊದಗಿದ್ದರಿಂದ ಪ್ರತಿಭಟನೆ ಕೈಗೊಳ್ಳಬೇಕಾಯಿತು. ಅ.5 ರೊಳಗಾಗಿ ಸಮರ್ಪಕ ನೀರು ಪೂರೈಕೆ ಮಾಡದೆ ಹೋದಲ್ಲಿ ಪಂಚಾಯತಿ ಎದರು ಉಗ್ರ ಹೋರಾಟ ಕೈಗೊಳ್ಳುವುದಾಗಿ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘಟಣೆಯ ಅಧ್ಯಕ್ಷ ಏಕನಾಥ ಸಾದಳಕರ ಮಾತನಾಡಿ, ಗಣೇಶ ನಗರದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಗ್ರಾಮ ಪಂಚಾಯತಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದರು.
ಈ ಸಂದರ್ಭದಲ್ಲಿ ಮಹಿಳೆಯರು, ರೈತ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.