“ತಮ್ಮ ಖುರ್ಚಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆಯುವ ಬೇಜವಾಬ್ದಾರಿ ಕೆಲಸ ಮಾಡ್ತಿದಾರೆ. ದುಷ್ಟ ಮುಖ್ಯಮಂತ್ರಿ ವಿರುದ್ಧ ಹೋರಾಟ ಮಾಡಲು ಜನ ಬೀದಿಗಿಳಿದಿದ್ದಾರೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯಲ್ಲೂ ಪ್ರತಿಭಟನೆ ನಡೆಸುತ್ತೇವೆ. ಅವರು ರಾಜೀನಾಮೆ ಕೊಡುವ ದಿನ ದೂರವಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದ ರಾಜ್ಯ ಸಚಿವ ಸಂಪುಟ ನಿರ್ಣಯದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಬಿಜೆಪಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, “ಸಿದ್ದರಾಮಯ್ಯನವರು ಕಳೆದ ಮೂರು ತಿಂಗಳಿನಿಂದ ವಿಲವಿಲ ಒದ್ದಾಡ್ತಿದ್ದಾರೆ. ಕಾವೇರಿ ನಿವಾಸದಿಂದ ಹೊರಬರಲು ಯೋಚನೆ ಮಾಡ್ತಿದ್ದಾರೆ. ಈಗ ಜಾತಿ ಜನಗಣತಿ ವಿಚಾರ ತೆಗೆದಿದ್ದಾರೆ. ಎನ್ಐಎ ತನಿಖೆ ಇನ್ನೂ ನಡೀತಿದೆ. ಇಷ್ಟಿದ್ದರೂ ಜವಾಬ್ದಾರಿಯುತ ಸಿಎಂ ಆಗಿ ಈ ರೀತಿ ಕರ್ತವ್ಯ ನಿರ್ವಹಿಸಿರೋದು ಸರೀನಾ? ಇವತ್ತು ಮತ್ತೊಮ್ಮೆ ಹೇಳ್ತೇನೆ, ಸಿದ್ದರಾಮಯ್ಯನವರೇ ನೀವು ರಾಜೀನಾಮೆ ಕೊಡೋದು ನಿಶ್ಚಿತ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರೆ ಅಂತಾ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಹೇಳಿಸಿ ನೋಡೋಣ? ಎಂದು ಸವಾಲು ಹಾಕಿದರು. “ರಾಜೂ ಕಾಗೆ ಅವರು ಇಂತಹ ಸರ್ಕಾರದಲ್ಲಿ ಶಾಸಕರಾಗಿ ಇರೋದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳೋದು ಸೂಕ್ತ ಎಂದಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಮುಳುಗಿ ಹೋಗಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡು ಕಾಲ ಸನ್ನಿಹಿತ. ದೇಶದ್ರೋಹಿಗಳ ಕೇಸ್ ವಾಪಸ್ ತೆಗೆದುಕೊಳ್ತಿದಾರೆ. ಇನ್ನೆಷ್ಟು ದಿನ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡ್ತೀರಿ? ಜಮ್ಮು ಕಾಶ್ಮೀರ ರಿಸಲ್ಟ್ ನೋಡಿಯೂ ತಿಳಿದುಕೊಳ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು “ಕಾಂಗ್ರೆಸ್ನವರು ಯಾರೋ ಋಣ ತೀರಿಸೋಕೆ ಹೊರಟಿದ್ದಾರೆ. ಈಗ ಖರ್ಗೆ ಅವರು ಸೈಟ್ ವಾಪಸ್ ಕೊಟ್ಟಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರು ಸೈಟ್ ವಾಪಸ್ ಕೊಟ್ಟಿದಾರೆ. ಇನ್ನೊಂದೆಡೆ ಕೇಸ್ ವಾಪಸ್ ಪಡೀತಿದಾರೆ. ಸಿದ್ದರಾಮಯ್ಯ ಅವರನ್ನು ಎಲ್ರೂ ಕೈಬಿಟ್ಟಿದ್ದಾರೆ. ಸಿ.ಟಿ.ರವಿ ಅವರೇನು ಕೇಳಿರಲಿಲ್ಲ, ಕೇಸ್ ವಾಪಸ್ ತಗೋಳಿ ಎಂದಿರಲಿಲ್ಲ, ಕನ್ನಡ ಹೋರಾಟಗಾರ ನಾರಾಯಣ ಗೌಡ್ರನ್ನು ಯಾಕೆ ತಿಂಗಳುಗಟ್ಟಲೆ ಜೈಲಿಗೆ ಹಾಕಿದ್ರಿ? ಮುನಿರತ್ನರನ್ನು ನಾವ್ಯಾರೂ ಸಪೋರ್ಟ್ ಮಾಡಲ್ಲ, ವಿನಯ್ ಕುಲಕರ್ಣಿ ಅವರನ್ನು ಯಾಕೆ ಅರೆಸ್ಟ್ ಮಾಡಿಲ್ಲ? ಎನ್ಐಎ ಕೇಸ್ ನಡೀತಿದೆ, ಕೋರ್ಟ್ ಜಾಮೀನು ನೀಡಲಿಲ್ಲ, ಪಬ್ಲಿಕ್ ಪ್ರಾಸಿಕ್ಯೂಟರ್ ಚೇಂಜ್ ಮಾಡಿ ಅವರಿಗೆ ಬೇಲ್ ಸಿಗುವಂತೆ ಮಾಡಿದ್ರು” ಎಂದು ಆರೋಪಿಸಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಅವರು ನಮ್ಮನ್ನು ಮನುವಾದಿ ಎನ್ನುವ ಸಿಎಂ ಸಿದ್ಧರಾಮಯ್ಯ ಸ್ವತಃ ಮನುವಾದಿಯಂತೆ ವರ್ತಿಸುತ್ತಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಉಗ್ರಗಾಮಿಗಳಾದರೇ, ಪೊಲೀಸರ ಮೇಲೆ ಕಲ್ಲು ತೂರುವವರು ದೇಶಪ್ರೇಮಿಗಳೇ ಎಂದು ಪ್ರಶ್ನಿಸಿದರು. ಸಿದ್ಧರಾಮಯನ್ಯನಂತಹ ಕಳಪೆ ಸಿಎಂ ಹಿಂದೆಂದು ಕಂಡಿಲ್ಲ ಎಂದರು.
ಸಂಸದ ಗೋವಿಂದ ಕಾರಜೋಳ, ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ್, ಸೇರಿದಂತೆ ಇನ್ನುಳಿದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ಧರು.