ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಹಣದಿಂದ ರಾಜ್ಯಕ್ಕೆ ಅನುದಾನ ನೀಡದೇ ತಾರತಮ್ಯ ಮಾಡುತ್ತಿದ್ದು, ಇದೇನಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
ಇಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಪುಣ್ಯ ಸ್ಮರಣೆ ಮತ್ತು ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಜಯಂತಿಯನ್ನು ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ ವಲ್ಲಭಭಾಯಿ ಪಟೇಲ್ ಅವರು ಸ್ವಾತಂತ್ರ್ಯಕ್ಕಾಗಿ ಮಾಡಿದ ಕಾರ್ಯ ಅಪ್ರತಿಮ. ಉಕ್ಕಿನ ಮನುಷ್ಯನೆಂದೇ ಅವರು ಖ್ಯಾತಿಯನ್ನು ಪಡೆದಿದ್ದಾರೆ ಎಂದರು.
ಇನ್ನು ದೇಶದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೇಲೆ ಅಪಾರ ಅಭಿಮಾನವಿದೆ. ಬಡವರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿಯುವಂತಹ ಕಾರ್ಯವನ್ನು ದೇಶದ ಮಹಿಳಾ ಪ್ರಧಾನಿ ಅವರು ಮಾಡಿದ್ದಾರೆ ಎಂದು ಅವರ ಕಾರ್ಯವನ್ನು ಸ್ಮರಿಸಿದರು. ವಿರೋಧ ಪಕ್ಷದವರು ಇಂದಿರಾಗಾಂಧಿಯವರ ಬಗ್ಗೆ ಅಪಾರ ಅಭಿಮಾನವನ್ನು ಇಟ್ಟಿಕೊಂಡಿದ್ದರು. ಬಿಜೆಪಿಯ ವಾಜಪೇಯಿಯವರು ಲೋಕಸಭೆಯಲ್ಲಿ ಇಂದಿರಾ ಗಾಂಧಿ ಅವರನ್ನು ದುರ್ಗೆ ಎಂದು ಕರೆದಿದ್ದೆ ಇದಕ್ಕೆ ಸಾಕ್ಷಿ ಎಂದರು.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸರ್ದಾರ ವಲ್ಲಭಭಾಯಿ ಅವರ ಕಾರ್ಯವನ್ನು ಸ್ಮರಿಸಿದರು. ಹೈದ್ರಾಬಾದ್ ಕರ್ನಾಟಕ ಮತ್ತು ಮರಾಠಾವಾಡಾದಲ್ಲಿ ತಡವಾಗಿ ಸ್ವಾತಂತ್ರ್ಯ ಸಿಕ್ಕಿತ್ತು. ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡುವಲ್ಲಿ ವಲ್ಲಭಭಾಯಿ ಪಟೇಲರ ಕಾರ್ಯ ಅತುಲನೀಯ ಎಂದರು. ಇನ್ನು ಇಂದಿರಾ ಗಾಂಧಿಜೀಯವರ ಕಾರ್ಯವನ್ನು ಸ್ಮರಿಸಿದರು. ಇದೇ ವೇಳೆ ಬಿಜೆಪಿಯವರ ಮೇಲೆ ವಾಗ್ಧಾಳಿಯನ್ನು ನಡೆಸಿದರು. ದೇಶದಲ್ಲಿ ಸಬ್ ಕಾ ವಿಕಾಸ್ ಎಂದು ಹೇಳಿ ರಾಜ್ಯದ ಹಣವನ್ನು ತೆಗೆದುಕೊಂಡು ರಾಜ್ಯಕ್ಕೆ ಜಿಎಸಟಿ ಹಣ ನೀಡದೇ ಅನ್ಯಾಯ ಮಾಡುತ್ತಿದೆ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯವೇ? ಎಂದು ಪ್ರಶ್ನಿಸಿದರು.