ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ದೇಶದೆಲ್ಲೆಡೆ ಜನಪ್ರಿಯಗೊಳಿಸಿ ಬೆಳಗಾವಿಯ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಬೆಳಗಾವಿ ಅಂಚೆ ಇಲಾಖೆ ಕೈ ಜೋಡಿಸಿದೆ ಎಂದು ಅಂಚೆ ಇಲಾಖೆಯ ಅಧೀಕ್ಷಕ ವಿಜಯ ಬಡೋಣಿ ಹೇಳಿದರು.
ಜಿಲ್ಲಾಡಳಿತ ಮತ್ತು ಬೆಳಗಾವಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಲಗಾಮ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯ ಮೇಲೆ ಶಾಸಕ ಆಸೀಫ್ ಸೇಠ್, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟೀನ್ ಮಾರ್ಬನ್ಯಾಂಗ್, ಅಂಚೆ ಇಲಾಖೆಯ ಅಧೀಕ್ಷಕ ವಿಜಯ ಬಡೋಣಿ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸೌಮ್ಯ ಬಾಪಟ, ನಿರ್ದೇಶಕ ಡಾ. ರಾಜೇಂದ್ರ ಕೆ.ವಿ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ದರು. ಗಣ್ಯರ ಹಸ್ತದಿಂದ ಕಾರ್ಯಕ್ರಮವನ್ನು ಉದ್ಘಾಟಿಸಿ, ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣಗಳ ಜನಪ್ರಿಯತೆಗಾಗಿ ಅಂಚೆ ಇಲಾಖೆಯ ಸಹಯೋಗದಲ್ಲಿ ವಿಶೇಷ ಅಂಚೆ ಚೀಟಿ, ಅಂಚೆ ರದ್ಧತಿ ಮತ್ತು ಲಕೋಟೆ ಸೇರಿದಂತೆ ಅಂಚೆ ಚಿತ್ರ ಕಾರ್ಡಗಳನ್ನು ಬಿಡುಗಡೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅವರು, ಪ್ರವಾಸಿಗರು ಸುರಕ್ಷತೆಯನ್ನು ಮೊದಲು ಯೋಚಿಸುತ್ತಾರೆ. ಬೆಳಗಾವಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಗಟ್ಟಿಯಾಗಿದೆ. ಬೆಳಗಾವಿ ಪೊಲೀಸರು ಹಗಲು ರಾತ್ರಿ ಶ್ರಮ ವಹಿಸುತ್ತಾರೆ. ಗೋವಾಗಿಂತಲೂ ಕರ್ನಾಟಕದಲ್ಲಿ ಅತ್ಯಂತ ಒಳ್ಳೆಯ ಪ್ರವಾಸಿ ತಾಣಗಳಿವೆ. ಬೆಳಗಾವಿಯ ಕೋಟೆಯ ಗೋಡೆಯನ್ನು ಅಭಿವೃದ್ಧಿಪಡಿಸಬೇಕು. ಇದು ಪ್ರವಾಸಿಗರನ್ನು ಆಕರ್ಷಿಸಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಗಮನ ಸೆಳೆದರು. ಅಲ್ಲದೇ ಪ್ರವಾಸಿಗರಿಗೆ ಒಳ್ಳೆಯ ಸೇವೆಯನ್ನು ನೀಡುವುದರ ಮೂಲಕ ಅವರನ್ನು ಆರ್ಕಷಿಸುವ ಕೆಲಸವನ್ನು ಪ್ರವಾಸಿಗರು ಮಾಡಬೇಕೆಂದು ಕರೆ ನೀಡಿದರು.
ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳು ಇವೆ , ಪ್ರವಾಸೋದ್ಯಮ ಇಲಾಖೆ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯ. ಪ್ರವಾಸೋದ್ಯಮಕ್ಕೆ ಶಾಂತಿ – ಸುವ್ಯವಸ್ಥೆ ಕಾಪಾಡುವುದು ಅವಶ್ಯಕ. ಮೊದಲೆಲ್ಲ ಜಮ್ಮು-ಕಾಶ್ಮೀರಕ್ಕೆ ಹೋಗಲು ಭಯ ಕಾಡುತ್ತಿತ್ತು. ಈಗ ಅದು ನಿಯಂತ್ರಣದಲ್ಲಿದೆ. ಅದೇ ರೀತಿ ಭಯಮುಕ್ತ ವಾತಾವರಣ ನಿರ್ಮಾಣವಾಗಬೇಕು ಎಂದರು.
ಇನ್ನು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ನಮ್ಮ ರಾಜ್ಯ ತುಂಬಾ ಸುಂದರವಾಗಿದೆ. ಗುಡ್ಡ, ಸಮುದ್ರ, ಅರಣ್ಯ, ಜಲಪಾತ ಎಲ್ಲ ರೀತಿಯ ಪ್ರವಾಸಿ ತಾಣಗಳು ಇಲ್ಲಿವೆ. ಇದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ. ಬೆಳಗಾವಿ ಜಿಲ್ಲೆಯೂ ಸುಂದರ ಪ್ರವಾಸಿ ತಾಣವಾಗಿದೆ. ಜನರ ವರ್ತನೆಯೂ ಪ್ರವಾಸಿಗರೊಂದಿಗೆ ಸರಿಯಾಗಿರಬೇಕು. ಪ್ರವಾಸಿ ತಾಣಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಇನ್ನು ಅಂಚೆ ಇಲಾಖೆಯ ಅಧೀಕ್ಷಕ ವಿಜಯ ಬಡೋಣಿ ಅವರು ಅಂಚೆ ಇಲಾಖೆಯೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಪ್ರೇಕ್ಷಣಿಯ ಸ್ಥಳಗಳು, ಪ್ರಖ್ಯಾತ ದೇವಸ್ಥಾನಗಳು, ಐತಿಹಾಸಿಕ ತಾಣಗಳು ಮತ್ತು ಪ್ರವಾಸಿ ತಾಣಗಳ ಮಾಹಿತಿಯನ್ನು ದೇಶದೆಲ್ಲೆಡೆ ಪಸರಿಸಿ, ಸುಂದರ ಬೆಳಗಾವಿ ಜಿಲ್ಲೆಯನ್ನು ಐತಿಹಾಸಿಕ ಮತ್ತು ಆದರ್ಶ ಜಿಲ್ಲೆಯನ್ನಾಗಿಸುವ ಉದ್ಧೇಶ ಹೊಂದಲಾಗಿದೆ. ಸರ್ಕಾರ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿದೆ. ಭಾರತೀಯ ಅಂಚೆ ಇಲಾಖೆ, ಪ್ರವಾಸೋದ್ಯಮ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಎಲ್ಲ ಪ್ರವಾಸಿ ತಾಣಗಳನ್ನು ಜನಪ್ರಿಯಗೊಳಿಸಲು ವಿಶೇಷ ಅಂಚೆ ಚೀಟಿ, ಅಂಚೆ ರದ್ಧತಿ ಮತ್ತು ಲಕೋಟೆ ಸೇರಿದಂತೆ ಅಂಚೆ ಚಿತ್ರ ಕಾರ್ಡಗಳನ್ನು ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಮಳಿಗೆಗಳಿಗೆ ಗಣ್ಯರಿಂದ ಚಾಲನೆಯನ್ನು ನೀಡಲಾಯಿತು.