Uncategorized

ಗೋಳಗುಮ್ಮಟ ಸ್ವಚ್ಛತೆ ಜಾಗೃತಿಯ ಸಂದೇಶ ಸಾರುವ `ವಾಷ್‌ಥಾನ್’ ಸಂಭ್ರಮ

Share

ನಸುಕಿನಲಿ ನೇಸರನ ಕಿರಣಗಳು ಒಡಮೂಡುವ ಮೊದಲೇ ಐತಿಹಾಸಿಕ ಗೋಳಗುಮ್ಮಟ ಸ್ವಚ್ಛತೆ ಜಾಗೃತಿಯ ಸಂದೇಶ ಸಾರುವ `ವಾಷ್‌ಥಾನ್’ ಸಂಭ್ರಮ ಉದಯಿಸಿತ್ತು. ಚುಮುಚುಮು ಚಳಿ, ಹಸಿರ ಸಿರಿಯಲ್ಲಿ ಸಾವಿರಾರು ಯುವಕರ ದಂಡು ಗೋಳಗುಮ್ಮಟ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದರು. ವಿಜಯಪುರದಲ್ಲಿ ಸ್ವಚ್ಚತೆ, ನೈರ್ಮಲ್ಯದ ಜಾಗೃತಿಗಾಗಿ ವಿಶೇಷ ಮ್ಯಾರಾಥಾನ್, ನಡಿಗೆ ಹೀಗೆ ಎಲ್ಲವನ್ನೂ ಕೇಂದ್ರಿಕರಿಸಿದ `ವಾಷ್‌ಥಾನ್’ ಹೆಸರಿನ ಓಟ ಯಶಸ್ವಿಯಾಗಿ ನಡೆಯಿತು.

ಈ ನಡಿಗೆಯಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ವಾಷ್‌ಥಾನ್ ಯಶಸ್ಸಿಗೆ ಕೈ ಜೋಡಿಸಿದರು. ವಿಜಯಪುರ ಜಿಲ್ಲೆಯನ್ನು ಸೇವೆಯ ದತ್ತು ಜಿಲ್ಲೆಯಾಗಿ ಸ್ವೀಕರಿಸಿರುವ ನವದೆಹಲಿಯ ಲಾಡಲಿ ಫೌಂಡೇಷನ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಓಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಟೀ-ಶೀರ್ಟ್ ನೀಡಲಾಗಿತ್ತು. ಸ್ವಚ್ಛತೆಯ ಸಂದೇಶ ಸಾರುವ ಶುಭ್ರ ಹಾಗೂ ಹಸಿರು ವರ್ಣದ ಸಮ್ಮಿಳಿತವುಳ್ಳ ಟೀಶರ್ಟ್ಗಳನ್ನು ಧರಿಸಿದ ಸಾವಿರಾರು ಯುವಕ, ಯುವತಿಯರು ಓಟದಲ್ಲಿ ಭಾಗವಹಿಸಿದರು.

ಸ್ವಚ್ಛತೆಗಾಗಿ ನಮ್ಮ ಹೆಜ್ಜೆ, ಸ್ವಚ್ಛತೆ ನಮ್ಮ ಆದ್ಯತೆ, ಸ್ವಚ್ಛತೆ ನಮ್ಮ ಉಸಿರು, ಶುಭ್ರವಾಗಿ ಕೈ ತೊಳೆಯೋಣ – ಆರೋಗ್ಯ ನಮ್ಮದಾಗಿಸಿಕೊಳ್ಳೋಣ, ನೈರ್ಮಲ್ಯ ನಮ್ಮ ಕರ್ತವ್ಯ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಯುವಕರು ನಡಿಗೆಯಲ್ಲಿ ಭಾಗವಹಿಸಿದರು. ಸ್ವಚ್ಛತೆಯ ಮಹತ್ವ ಸಾರುವ, ಕೈ ತೊಳೆಯುವುದರಿಂದ ಆಗುವ ಪ್ರಯೋಜನಗಳು ಮೊದಲಾದವುಗಳನ್ನು ಸಚಿತ್ರವಾಗಿ ವಿವರಿಸುವ ಫಲಕಗಳು ಎಲ್ಲೆಡೆ ರಾರಾಜಿಸಿದವು.

ಮ್ಯಾರಾಥಾನ್ ಹಾಗೂ ನಡಿಗೆ ಹೀಗೆ ಅನೇಕ ವಿಭಾಗಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ೨೧ ಕಿ.ಮೀ. ಮ್ಯಾರಾಥಾನ್ ವಿಭಾಗದಲ್ಲಿ ಐತಿಹಾಸಿಕ ಗೋಳಗುಮ್ಮಟದಿಂದ ಐತಿಹಾಸಿಕ ಬೇಗಂ ತಲಾಬ್‌ವರೆಗೆ ನಡೆದರೆ, ಇನ್ನೊಂದು ೧೦ ಕಿ.ಮೀ. ವಿಭಾಗದ ಮ್ಯಾರಾಥಾನ್ ಗೋಳಗುಮ್ಮಟದಿಂದ ಇಟಗಿ ಪೆಟ್ರೋಲ್ ಪಂಪ್ (ಅಥಣಿ ರಸ್ತೆ)ಯವರೆಗೆ ನಡೆಯಿತು, ಇನ್ನೊಂದು ವಿಭಾಗದಲ್ಲಿ ೫ ಕಿ.ಮೀ. ವಿಭಾಗದಲ್ಲಿ ಗೋಳಗುಮ್ಮಟದಿಂ ಶಿವಾಜಿ ಮಹಾರಾಜರ ವೃತ್ತದವರೆಗೆ ಮ್ಯಾರಾಥಾನ್ ನಡೆಯಿತು. ನಡಿಗೆಯಲ್ಲಿಯೇ ೧೦ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ವಾಷ್‌ಥಾನ್‌ಗೆ ಹಸಿರು ನಿಶಾನೆ ತೋರುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಓ ರಿಷಿ ಆನಂದ್, ಎಸ್.ಪಿ. ಋಷಿಕೇಶ ಸೋನಾವಣೆ, ಲಾಡಲಿ ಫೌಂಡೇಷನ್ ರಾಷ್ಟಿçÃಯ ಸಲಹೆಗಾರ ಡಾ.ಜಾವೀದ ಜಮಾದಾರ, ಲಾಡಲಿ ಫೌಂಡೇಷನ್ ಸಿಇಓ ದೇವೆಂದ್ರ ಗುಪ್ತಾ ಪಾಲ್ಗೊಂಡಿದ್ದರು.

 

Tags:

error: Content is protected !!