ನಿನ್ನೆ ರಾತ್ರಿ ಈಶ್ವರಪ್ಪ ನಿವಾಸದಲ್ಲಿ ಯಾರೆಲ್ಲ ಸಭೆ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಈಶ್ವರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆ ತರಬೇಕು ಎನ್ನುವ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಯಾವುದೇ ಪ್ರಯತ್ನವೂ ನಡೆಯುತ್ತಿಲ್ಲ. ಒಂದು ವೇಳೆ ರಾಷ್ಟ್ರ ನಾಯಕರು ಕೇಳಿದರೆ ಮಾಹಿತಿ ನೀಡುತ್ತೇವೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ ಈಶ್ವರಪ್ಪ ನಿವಾಸಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಯಾರ್ಯಾರರು ಹೋಗಿದ್ದರು ಎಂಬುದು ಗೊತ್ತಿಲ್ಲ. ನಾನು ಈಶ್ವರಪ್ಪ ಹೇಳಿಕೆ ಬಗ್ಗೆ ಮಾತನಾಡಬಾರದು ಅಂದುಕೊಂಡಿದ್ದೆ. ಆದರೆ ಅವರು ಬಹಳ ಕಾಳಜಿ ಇಟ್ಟುಕೊಂಡು ಬಿಜೆಪಿ ಪರವಾಗಿ ಮಾತನಾಡಿದ್ದಾರೆ. ತಾವು ವಿಜಯೇಂದ್ರ ನಾಯಕತ್ವ ಒಪ್ಪಲ್ಲ ಅಂತ ಹೇಳಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿರೋದರಿಂದ ಅವರ ಉಚ್ಚಾಟನೆ ಆಗಿದೆ. ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದರು. ಪಕ್ಷಕ್ಕಾಗಿ ಸ್ಪರ್ಧೆ ಮಾಡಲಿಲ್ಲ. ಮಗನಿಗಾಗಿ ಆ ರೀತಿ ಮಾಡಿದ್ದರು. ಅವರಿಗೆ ಶಿವಮೊಗ್ಗದಲ್ಲಿ ಠೇವಣಿ ತೆಗೆದುಕೊಂಡಿಲ್ಲ ಅಂತ ನೋವು ಕಾಡ್ತಿದೆ” ಎಂದು ವ್ಯಂಗ್ಯವಾಡಿದರು.
ಬಿಜೆಪಿಯಲ್ಲಿ ಒಗ್ಗಟ್ಟು ಇಲ್ಲ ಎನ್ನುವುದು ಸರಿಯಲ್ಲ. ಒಗ್ಗಟ್ಟಿನಿಂದಲೇ ಪಾದಯಾತ್ರೆ ಮಾಡಿದ್ದು. ಪಾದಯಾತ್ರೆ ಯಶಸ್ವಿಯಾಗಿದೆ. ಕೋರ್ಟ್ ತನಿಖೆಗೆ ಅನುಮತಿ ಕೊಟ್ಟಿದೆ. ನಿನ್ನೆ ಮುಡಾ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಕೂಡ ನೀಡಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿರುವುದು ಸರಿ ಇದೆ ಎಂದು ಹೇಳಿದೆ. ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ನೋಡಿದ್ದೇನೆ. ಅವರು ಇನ್ನು ಭಂಡತನ ಬಿಟ್ಟಿಲ್ಲ. ರಾಜಭವನವನ್ನು ದುರುಪಯೋಗ ಮಾಡಿಕೊಳ್ತಿದ್ದಾರೆ ಅಂತ ಮತ್ತೆ ಸಿಎಂ ಹೇಳಿದ್ದಾರೆ. ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಹೈಕೋರ್ಟ್ ಆದೇಶ ಇದ್ದರೂ ಇದು ರಾಜಕೀಯ ಪ್ರೇರಿತ ಅಂತ ಮತ್ತೆ ಹೇಳಿದ್ದಾರೆ. ಹೈಕೋರ್ಟ್ ತೀರ್ಪಿಗೆ ನೀವು ಗೌರವ ಕೊಡಬೇಕು. ನಿಮ್ಮ ಕುಟುಂಬದ ಮೇಲೆ ಆರೋಪ ಬಂದಿರೋದ್ರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು
ನಿನ್ನೆ ಸಿಎಂ ಮಾಧ್ಯಮಗೋಷ್ಟಿ ಮಾಡಿದ್ದಾರೆ. ನಾನು ರಾಜೀನಾಮೆ ನೀಡಲ್ಲ ಎಂದು ಹೇಳುವಾಗ ಪಕ್ಕದಲ್ಲೇ ಇದ್ದ ಡಿ.ಕೆ. ಶಿವಕುಮಾರ್ ಗಂಭೀರವಾಗಿ ಕುಳಿತಿದ್ದರು. ಅವರು ಕುಳಿತಿದ್ದ ರೀತಿ ಹೇಗಿತ್ತು ಎಂದರೆ, ನೀವು ಹೇಗೆ ರಾಜೀನಾಮೆ ಕೊಡಲ್ವೋ ನಾನೂ ನೋಡ್ತೇನೆ ಎನ್ನುವ ಶೈಲಿಯಲ್ಲಿ ಇತ್ತು” ಎಂದು ಡಿ. ಕೆ. ಶಿವಕುಮಾರ್ಗೆ ಟಾಂಗ್ ನೀಡಿದರು.
ಮಂಡ್ಯದ ನಾಗಮಂಗಲದಲ್ಲಿ ನಮ್ಮ ಕಾರ್ಯಕರ್ತೆ ಛಾಯ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗಿ ಆಗಿದ್ದರು. ಅವರನ್ನು ರಾತ್ರಿ 12 ಗಂಟೆ ತನಕ ಪೊಲೀಸ್ ಠಾಣೆಯಲ್ಲಿ ಕೂರಿಸಿದ್ದರು. ಒಟಿಪಿ ಡೌನ್ಲೋಡ್ ಮಾಡ್ತಾ ಇದ್ದೀರಿ ಎಂದು ಕಾರಣ ನೀಡಿ ಕೂರಿಸಿದ್ದರು. ಇದನ್ನು ನಾವು ಸಹಿಸಲ್ಲ. ಪದೇ ಪದೆ ನಮ್ಮ ಕಾರ್ಯಕರ್ತರಿಗೆ ತೊಂದರೆ ನೀಡುತ್ತಿದ್ದಾರೆ. ಇದು ಸಣ್ಣ ವಿಷಯ ಅಲ್ಲ. ಗೃಹ ಸಚಿವರು ಗಮನ ಹರಿಸಬೇಕು. ಇಲ್ಲವಾದರೆ ಪೊಲೀಸ್ ಠಾಣೆಗೆ ನಾವು ಮುತ್ತಿಗೆ ಹಾಕುತ್ತೇವೆ” ಎಂದು ಎಚ್ಚರಿಕೆ ರವಾನಿಸಿದರು.