ಈಶ್ವರಪ್ಪರನ್ನು ಬಿಜೆಪಿಗೆ ಕರೆತರುವ ಶಕ್ತಿ ನನಗಿಲ್ಲ. ಈಶ್ವರಪ್ಪರನ್ನು ನಮ್ಮ ರಾಷ್ಟ್ರೀಯ ನಾಯಕರೇ ಉಚ್ಛಾಟನೆ ಮಾಡಿದ್ದಾರೆ. ಈಶ್ವರಪ್ಪ ಅವರನ್ನು ರಾಷ್ಟ್ರೀಯ ನಾಯಕರೇ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ
ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈಶ್ವರಪ್ಪ ಮನೆಯಲ್ಲಿ ನಡೆದ ಸಭೆಯಲ್ಲಿ ಯಾವುದೇ ವಿಶೇಷತೆ ಏನೂ ಇಲ್ಲ. ನಾನು ಮುಂಬೈನಿಂದ ಬೆಂಗಳೂರಿಗೆ ಬಂದ ತಕ್ಷಣವೇ ಯತ್ನಾಳ ಕಾಲ್ ಮಾಡಿದ್ರು. ಈಶ್ವರಪ್ಪ ಮನೆಗೆ ಹೋಗಿ ಬರೋಣ ಎಂದು ಯತ್ನಾಳ ಕಾಲ್ ಮಾಡಿ ಕರೆದರು. ಆದರೆ ಅಂದು ಈಶ್ವರಪ್ಪ ಮನೆಗೆ ರಾಜುಗೌಡ ಬಂದಿದ್ದು ಗೊತ್ತಿರಲಿಲ್ಲ. ರಾಜುಗೌಡ ಬಂದಿದ್ದು ಗೊತ್ತಾದ್ರೆ ನಾನು ಒಳಗೆ ಹೋಗುತ್ತಿರಲಿಲ್ಲ. ಈಶ್ವರಪ್ಪ ಮನೆಯಲ್ಲಿ ಯಾವುದೇ ರಾಜಕೀಯ ಚರ್ಚೆಗಳೇ ಆಗಿಲ್ಲ ಎಂದು ಹೇಳಿದ್ದರು .
ಈಶ್ವರಪ್ಪ-ಯತ್ನಾಳ ಅವರು ತಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಿಸುವ ಬಗ್ಗೆ ಚರ್ಚಿಸಿದರು. ಪಂಚಮಸಾಲಿಗೆ 2 ಎ ಮೀಸಲಾತಿ, ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಬಗ್ಗೆಯಷ್ಟೇ ಚರ್ಚೆ ಆಗಿದೆ ಅಷ್ಟೇ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಈಶ್ವರಪ್ಪ ಆರ್ಸಿಬಿ ಬ್ರಿಗೇಡ್ ಸ್ಥಾಪನೆ ಬಗ್ಗೆ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಸಂಘಟನೆ ಮಾಡಬಹುದು, ಅವರ ಹಕ್ಕಿದೆ. ಈಶ್ವರಪ್ಪ ಹಿಂದುಳಿದ ವರ್ಗಗಳ ನಾಯಕ. ಆದರೆ ಅವರ ಮನೆಯಲ್ಲಿ ಸೇರಿದನ್ನು ರಾಜಕೀಯ ಮಾಡಿದ್ದರ ಬಗ್ಗೆ ಬೇಜಾರಿದೆ. ರಾಜೂಗೌಡ ಬಿಎಸ್ ವೈ ಶಿಷ್ಯಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜೂಗೌಡ ಸ್ವಭಾವ ಮೊದಲಿನಿಂದಲೂ ಹೀಗೆ ಇದೆ ಎಂದು ಹೇಳಿದ್ದರು .
ನಾವು ಭಿನ್ನಮತೀಯ ನಾಯಕರು ಅಲ್ಲವೇ ಅಲ್ಲ. ಪಕ್ಷ ಶುದ್ಧೀಕರಣಕ್ಕಾಗಿ ಸಭೆ ಮಾಡ್ತಿದ್ದೇವೆ, ಸಂಘಟನೆಗೆ ಸಭೆ, ಪಕ್ಷದ ಚೌಕಟ್ಟಿನಲ್ಲಿ ನಾವು ಕೆಲಸ ಮಾಡ್ತಿದ್ದೇವೆ ಎಂದ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.