ತುಂಗಭದ್ರಾ ಜಲಾಶಯದ ಒಂದು ಗೇಟ್ ಮುರಿದಿರುವುದು ತುಂಬಾ ನೋವಿನ ಸಂಗತಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ನಾಲ್ಕು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಾಭದ್ರ ಜಲಾಶಯದ ಕ್ರಸ್ಟ್ ಗೇಟ್ 19 ಕಟ್ ಆಗಿ ನೀರಿನಲ್ಲಿ ಕಳಚಿ ಹೋಗಿದೆ. ಇದರಿಂದ ಆತಂಕ ಮನೆ ಮಾಡಿದ್ದು, ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತುಂಗಭದ್ರಾ ಡ್ಯಾಂ ಗೆ ಆಗಮಿಸಿ, ಗೇಟ್ ಕುಸಿದಿರುವುದನ್ನು ಪರಿಶೀಲನೆ ಮಾಡಿದರು ..
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ನದಿ ಪಾತ್ರದ ಜನರು ಆತಂಕಕ್ಕೊಳಗಾಗಬಾರದು. ಜನರ ಸುರಕ್ಷಿತ ಗಾಗಿ ಈಗಾಗಲೇ ಕಳೆದ ರಾತ್ರಿಯಿಂದ ಮಾಹಿತಿ ನೀಡಲಾಗಿದೆ. ಜನರ ಸುರಕ್ಷಿತೆಗಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ರಾತ್ರಿ ಹತ್ತು ಗೇಟ್ ಗಳಿಂದ ನೀರನ್ನು ಹೊರಬಿಡಲಾಗುತ್ತಿತ್ತು. ಆದ್ರೆ 19 ನೇ ಗೇಟ್ ನ ಚೈನ್ ಕಟ್ಟಾಗಿದೆ. ಗೇಟ್ ಹಾಕಬೇಕಾಗಿದ್ದರಿಂದ ನೀರನ್ನು ಹೊರಬಿಡಲಾಗುತ್ತಿದೆ. ರೈತರ ಒಂದು ಬೆಳೆಗಾದರೂ ನೀರು ನೀಡಲು ಕ್ರಮ ಕೈಗೊಳ್ಳುತ್ತೇವೆ. ರೈತರು ಗಾಬರಿ ಪಡುವುದು ಬೇಡ. ಮೂರು ಸರ್ಕಾರ ಗಳು ರೈತರಿಗೆ ಯಾವ ರೀತಿ ನ್ಯಾಯ ದೊರಕಿಸಿಕೊಡಬೇಕೋ ಅದನ್ನು ನೀಡುತ್ತೇವೆ. ರೈತರು ಆತಂಕಕ್ಕೊಳಗಾಗಬಾರದು. ಬಹಳಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಈ ಸಂಪತ್ತನ್ನು ಕಾಪಾಡೋ ಕೆಲಸ ಮಾಡುತ್ತೇವೆ. ಸಮಾನಾಂತರ ಜಲಾಶಯ ನಿರ್ಮಾಣದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಕರ್ನಾಟಕ, ತೆಲಂಗಾಣ, ಆಂಧ್ರ ರಾಜ್ಯದ ರೈತರ ಜೀವನಾಧಾರವಾಗಿದ್ದು, 12 ಲಕ್ಷ ಎಕರೆ ಜಮೀನಿಗೆ ನೀರು ಒದಗಿಸುವ ಉದ್ದೇಶದಿಂದ ಡ್ಯಾಂ ನಿರ್ಮಿಸಲಾಗಿದೆ. ನಿನ್ನೆ ರಾತ್ರಿವರೆಗೆ 10 ಕ್ರಸ್ಟ್ ಗೇಟ್ಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದೆ. 19ನೇ ಗೇಟ್ ಚೈನ್ ತುಂಡಾಗಿ ಮುರಿದುಬಿದ್ದಿದೆ. ಸುರಕ್ಷತೆ ದೃಷ್ಟಿಯಿಂದ 98 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ತುಂಗಭದ್ರಾ ಡ್ಯಾಮ್ ಗೆ ಪ್ರಸ್ತುತ 28,056 ಕ್ಯೂಸೆಕ್ ಒಳಹರಿವು ಇದೆ. ಮುರಿದುಬಿದ್ದಿರುವ ಗೇಟ್ ದುರಸ್ತಿ ಮಾಡಲು ನೀರಿನ ಪ್ರಮಾಣ ಇಳಿಕೆ ಮಾಡಬೇಕಿದೆ. ಈ ಮೂಲಕ 19ನೇ ಗೇಟ್ ಮೇಲೆ ಒತ್ತಡ ಕಡಿಮೆ ಮಾಡಲು ಹೆಚ್ಚಿನ ನೀರು ರಿಲೀಸ್ ಮಾಡಲಾಗಿದೆ. ಅಲ್ಲದೇ ಉಳಿದ ಗೇಟ್ಗಳ ಮೂಲಕ ಹೆಚ್ಚುವರಿ ನೀರು ನದಿಗೆ ಬಿಡುಗಡೆ ಮಾಡಲಾಗುತ್ತಿದ್ದು, ಗೇಟ್ ದುರಸ್ತಿ, ರೈತರ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಹೀಗಾಗಿ ಯಾರು ಆತಂಕಕ್ಕೊಳಗಾಬೇಡಿ ಎಂದು ಧೈರ್ಯ ಹೇಳಿದರು
ನಿನ್ನೆ ರಾತ್ರಿ 10.50 ಕ್ಕೆ ಗೇಟ್ ನಂಬರ್ 19 ಕಳಚಿ ಬಿದ್ದಿದೆ. ತಕ್ಷಣ ಟಿಬಿ ಬೋರ್ಡ್ ಅಧಿಕಾರಿಗಳು ಈ ಭಾಗದ ಜಿಲ್ಲಾಡಳಿತಗಳಿಗೆ ಮಾಹಿತಿ ರವಾನಿಸಿದ್ದಾರೆ. ಈಗ ನಾವು ರೈತರನ್ನ ಬದುಕಿಸಬೇಕು. ಟಿಬಿ ಡ್ಯಾಂ 105 ಟಿಎಂಸಿ ಸಾಮರ್ಥ್ಯ ಇದೆ, ಕೂಡಲೇ ನೀರನ್ನ ಬಿಡುಗಡೆ ಮಾಡಲು ತಿಳಿಸಲಾಗಿದೆ. ಒಟ್ಟು 98 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ, ಗೇಟ್ 19 ಒಂದರಲ್ಲೇ 38 ಕ್ಯೂಸೆಕ್ ಹೊಗ್ತಿದೆ. ಏನಾದ್ರು ಮಾಡಿ ಈಗ 43 ರಿಂದ 53 ಟಿಎಂಸಿಗೆ ಇಳಿಸಬೇಕಿದೆ. ಟೆಕ್ನಿಕಲ್ ಟೀಂ ಕೆಲಸ ಮಾಡುತ್ತಿದೆ. ಮುಖ್ಯ ಇಂಜಿನಿಯರ್ಗಳು ಸಹ ಇದ್ದಾರೆ. ಬೇರೆ ದುರಸ್ತಿ ಮಾದರಿಗಳನ್ನ ಪರಿಶೀಲಿಸಲಾಗಿದೆ, ತಮಿಳುನಾಡು, ಆಂಧ್ರದ ನುರಿತ ತಜ್ಞರು ಇದ್ದಾರೆ. ದುರಸ್ಥಿ ಕೆಲಸ ಪ್ರಾರಂಭವಾಗಿದೆ, ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ನಾಲ್ಕೈದು ದಿನದಲ್ಲಿ ಏನಾದ್ರು ಮಾಡಿ ದುರಸ್ಥಿ ಮಾಡಲು ಶತಪ್ರಯತ್ನ ಮಾಡಲಾಗುವುದು. ಸಿಎಂಗೆ ಮಾಹಿತಿ ಕೊಡಲಾಗಿದೆ, ಆಂಧ್ರ, ತೆಲಂಗಾಣಕ್ಕಿ ಮಾಹಿತಿ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.