ಆರ್ಥಿಕ ಸಂಕಷ್ಟ ಅನುಭವಿಸಿ ಶ್ರೀಲಂಕೆಗೆ ಹೋಗಿ ಅಂತರಾಷ್ಟ್ರೀಯ ವೀಲ್ಹಚೇರ್ ಪ್ಯಾರಾ ಥ್ರೋಬಾಲ್ ಚಾಂಪಿಯನಶಿಪನಲ್ಲಿ ಭಾಗವಹಿಸಿ ಕೊನೆಗೂ ಭಾರತಕ್ಕೆ ಚಿನ್ನದ ಪದಕ ತಂದು ಬೆಳಗಾವಿಯ ದಿವ್ಯಾಂಗ್ ಥ್ರೋಬಾಲಪಟುಗಳು ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಭೀತು ಪಡಿಸಿದ್ದಾರೆ.
ಶ್ರೀಲಂಕಾದಲ್ಲಿ ಇದೇ ಪ್ರಪ್ರಥಮಬಾರಿಗೆ ದಿವ್ಯಾಂಗರಿಗಾಗಿ ಅಂತಾರಾಷ್ಟ್ರೀಯ ಮಟ್ಟದವೀಲ್ಹಚೇರ್ ಪ್ಯಾರಾ ಥ್ರೋಬಾಲ್ ಚಾಂಪಿಯನಶಿಪನ್ನು ಆಯೋಜಿಸಲಾಗಿತ್ತು. ಇದರಲ್ಲಿ ಬೆಳಗಾವಿಯ 7 ಜನ ದಿವ್ಯಾಂಗ ಕ್ರೀಡಾಳುಗಳು ಭಾರತದ ಪ್ರತಿನಿಧಿತ್ವವನ್ನು ವಹಿಸಿದ್ದರು. ಶ್ರೀಲಂಕಾ ಸಹಯೋಗದಲ್ಲಿ ಆಯೋಜಿಸಿರುವ ಚಾಂಪಿಯನ್ ಶಿಪ್ನಲ್ಲಿ ಭಾರತ, ಶ್ರೀಲಂಕಾ, ಥಾಯ್ಲೆಂಡ್, ನೇಪಾಳ ಸೇರಿ ಇನ್ನಿತರ ದೇಶಗಳ ತಂಡಗಳು ಭಾಗವಹಿಸಿದ್ದವು. ಪುರುಷರ ತಂಡದಲ್ಲಿ ಬೆಳಗಾವಿ ಜಿಲ್ಲೆಯ ಮಹಾಂತೇಶ ಹೊಂಗಲ, ಸೂರಜ್ ಧಾಮನೇಕರ್, ಸುರೇಶ ಕುಂಬಾರ, ಈರಣ್ಣ ಹೊಂಡಪ್ಪನವರ, ಮನಸೂರ್ ಮುಲ್ಲಾ ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ ಫೈನಲ್ ನಲ್ಲಿ ಭಾರತ ತಂಡಕ್ಕೆ ಕಪ್ ಗೆಲ್ಲಿಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಮಹಿಳೆಯರ ತಂಡದಲ್ಲಿ ಮನಿಷಾ ಪಾಟೀಲ, ಭಾಗ್ಯಶ್ರೀ ಮಳಲಿ ಅತ್ಯುತ್ತಮ ಆಟ ಪ್ರದರ್ಶನ ಮಾಡಿ ಬೆಳಗಾವಿಯ ಕೀರ್ತಿ ಪತಾಕೆಯನ್ನು ಶ್ರೀಲಂಕಾದಲ್ಲಿ ಮೊಳಗಿಸಿದ್ದು ಇತಿಹಾಸದ ಪುಟ ಸೇರಿದೆ. ಛಲದಿಂದ ವಿದೇಶಕ್ಕೆ ಹೋಗಿ ಆಟವಾಡಿದ ಕ್ರೀಡಾಳುಗಳು ಕೊನೆಗೂ ವಿಜಯವನ್ನು ಸಾಧಿಸಿದ್ದು, ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದು, ಭಾರತದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ.
ಇಂದು ಬೆಳಗಾವಿಗೆ ಆಗಮಿಸಿದ ಈ ಯಶಸ್ವಿ ಕ್ರೀಡಾಳುಗಳನ್ನು ಸ್ವಾಗತಿಸಲಾಯಿತು. ಈ ವೇಳೆ ಮಾತನಾಡಿದ ಸಂಘಟನೆಯ ಪ್ರಮುಖರು ದಿವ್ಯಾಂಗ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ನೀಡಿ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಪ್ರೋತ್ಸಾಹವನ್ನು ಸರ್ಕಾರ ನೀಡಬೇಕು. ನೌಕರಿಯಲ್ಲಿಯೂ ಅವರಿಗೆ ಮೀಸಲಾತಿ ನೀಡಿದರೇ ಆರ್ಥಿಕವಾಗಿಯೂ ಅವರು ಸದೃಢರಾಗುತ್ತಾರೆಂದು ಅಭಿಪ್ರಾಯಪಟ್ಟರು.
ಫೇಸ್ ಬುಕ್ ಫ್ರೇಂಡ್ಸ್ ಸರ್ಕಲನ ಸಂತೋಷ ದರೇಕರ ಅವರು ದಿವ್ಯಾಂಗ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದು, ಫಲವನ್ನು ನೀಡಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ತಂಡದ ನಾಯಕತ್ವ ವಹಿಸಿದ್ದ ಮಹಾಂತೇಶ ಹೊಂಗಲ ಅವರು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ, ಸರ್ಕಾರದಿಂದ ತಮಗೆ ಸಹಾಯ ದೊರೆತರೇ ಓಲಂಪಿಕ್ಸನಲ್ಲಿಯೂ ಸ್ಪರ್ಧಿಸಿ ಭಾರತದ ಹೆಸರನ್ನು ಉತ್ತುಂಗಕ್ಕೆ ಒಯ್ಯುವ ಮಹದಾಸೆಯನ್ನು ವ್ಯಕ್ತಪಡಿಸಿದರು. ಇದೇ ವೇಳೆ ತರಬೇತುದಾರ ವಿ.ಎಸ್. ಪಾಟೀಲರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ತರಬೇತುದಾರ ವಿ.ಎಸ್. ಪಾಟೀಲರು ತಾವು ತರಬೇತಿ ನೀಡಿದ ತಂಡ ಇಂದು ದೇಶಕ್ಕ ಚಿನ್ನ ತಂದಿದೆ. ಅವರು ಇನ್ನು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ನಾವು ಯಾರಿಗೂ ಕಮ್ಮಿಯಿಲ್ಲ ಎಂದು ಸಾಭೀತು ಪಡಿಸುವುದಾದರೇ ಅವರಿಗೆ ಸದಾಕಾಲ ತರಬೇತಿ ನೀಡಲೂ ತಾವು ಸದಾ ಸಿದ್ಧವೆಂದು ಭಾವುಕರಾಗಿ ನುಡಿದರು.
ಸರಕಾರದ ಯಾವುದೇ ಸಹಾಯ ಇಲ್ಲದೆ, ವಿಶೇಷ ಚೇತನ ಕ್ರೀಡಾಪಟುಗಳಿಗೆ ಸುರೇಶ ಯಾದವ್ ಫೌಂಡೇಶನ್, ಫೇಸ್ ಬುಕ್ ಫೇಡ್ರ್ ಸರ್ಕಲ್, ಸಮರ್ಥನಂ ಅಂಗವಿಕಲ ಸಂಸ್ಥೆ ಹಾಗೂ ಇಂಡಾಲ್ ಕೋ ಲಿಮಿಟೆಡ್ ಆರ್ಥಿಕ ಸಹಾಯ ಮಾಡಿ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.