Protest

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಸಿಎಂ ನಿವಾಸಕ್ಕೆ ಬಿಜೆಪಿ ಮುತ್ತಿಗೆ ಯತ್ನ, ಹಲವರು ವಶಕ್ಕೆ

Share

ವಾಲ್ಮೀಕಿ ನಿಗಮದಲ್ಲಿ ನಡೆದ 187 ಕೋಟಿ ರೂ. ಅವ್ಯವಹಾರದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಬೆಂಗಳೂರಿನ ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಹಗರಣಗಳ ಕಾಂಗ್ರೆಸ್ ಸರ್ಕಾರವೆಂದು ಆಕ್ರೋಶ ಭರಿತರಾಗಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದ ಬಿಜೆಪು ನಾಯಕರಿಗೆ ಪೊಲೀಸರು ತಡೆಯೊಡ್ಡಿದರು. ಕಾಲ್ನಡಿಗೆಯಲ್ಲಿ ಹೊರಟವರನ್ನು ಕುಮಾರಕೃಪಾ ಅತಿಥಿ ಗೃಹದ ಬಳಿ ಖಾಕಿ ಪಡೆ ತಡೆದು, ವಶಕ್ಕೆ ಪಡೆಯಲು ಮುಂದಾದಾಗ ಕೇಸರಿ ಪಡೆ ಕೆಂಡಾಮಂಡಲವಾಯಿತು.

ಪ್ರಜಾಸತ್ತಾತ್ಮಕ ಪ್ರತಿಭಟನೆಗೂ ಸರ್ಕಾರ ಅವಕಾಶ ಕೊಡದೆ ಪೊಲೀಸ್ ಬಲ ಬಳಸಿ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಶಾಸಕ ವಿ.ಸುನಿಲ್ ಕುಮಾರ್ ಕಿಡಿಕಾರಿದರು.

ಮೊದಲ ಹಂತದಲ್ಲಿ ಶಾಸಕರಾದ ವಿ.ಸುನಿಲ್ ಕುಮಾರ್, ಸುರೇಶಗೌಡ, ಸಿ.ಕೆ.ರಾಮಮೂರ್ತಿ, ಉದಯ್ ಗರುಡಾಚಾರ್ ಇನ್ನಿತರರು ಕಾಲ್ನಡಿಗೆಯಲ್ಲಿ ಸಾಗಿದ್ದರು. ಪೊಲೀಸ್ ಅಧಿಕಾರಿಗಳು ಬೇಡವೆಂದು ನಿಲ್ಲಿಸಲು ಪ್ರಯತ್ನಿಸಿದಾಗ ವಾಗ್ವಾದ ನಡೆಯಿತು.

ಈ ನಡುವೆ ಪ್ರತಿಭಟನಾಕಾರರು ಕಾಲ್ನಡಿಗೆ ಮುಂದುವರಿಸಿದರೆ ಖಾಕಿ ಪಡೆ ಬಲವಂತವಾಗಿ ವಶಕ್ಕೆ ತೆಗೆದುಕೊಳ್ಳುವಾಗ ನೂಕಾಟ, ತಳ್ಳಾಟವಾಯಿತು. ಆದರೂ ಬಿಜೆಪಿ ನಾಯಕರ ಮುತ್ತಿಗೆ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ವಶಕ್ಕೆ ಪಡೆದು ಕರೆದೊಯ್ದು ನಂತರ ಬಿಡುಗಡೆ ಮಾಡಿದರು.
ಇದಾದ ನಂತರ ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಮತ್ತಿತರ ಸರದಿ ಬಂತು. ಈ ನಾಯಕರನ್ನು ಅತಿಥಿ ಗೃಹದ ಬಳಿಯೇ ಪೊಲೀಸರು ಸುತ್ತುವರಿದರು. ಫುಟ್ ಪಾತ್ ನಡೆದು ಹೋಗುವವರನ್ನು ಪೊಲೀಸರು ತಡೆಯುವಂತಿಲ್ಲ ಎಂದ ಆರ್.ಅಶೋಕ್, ಮಾಧ್ಯಮದವರ ಮುಂದೆ ಮಾತಾಡುವುದನ್ನು ಅರ್ಧಕ್ಕೆ ತುಂಡರಿಸಿದ ಪೊಲೀಸರು ಬಲವಂತವಾಗಿ ಕರೆದೊಯ್ದು ತಮ್ಮ ಜೀಪು ಹತ್ತಿಸಿದರು.

ಅತ್ತ ಬಿ.ವೈ.ವಿಜಯೇಂದ್ರ, ಸಿ.ಟಿ.ರವಿ ಮತ್ತಿತರ ಶಾಸಕರ ತಂಡಕ್ಕೂ ಖಾಕಿ ಪಡೆ ದಿಗ್ಬಂಧನ ಹಾಕಿತ್ತು. ಮುತ್ತಿಗೆ ಯತ್ನ ಇರಲಿ, ಅತಿಥಿ ಗೃಹದಿಂದ ಹೊರ ಬರುತ್ತಿದ್ದಂತೆಯೇ ಪೊಲೀಸರು ವಶಕ್ಕೆ ಪಡೆದು, ಬಸ್ ಗೆ ಹತ್ತಿಸಿದರು. ಈ ವೇಳೆ ಕಾಂಗ್ರೆಸ್ ಸರ್ಕಾರದ ಧಿಕ್ಕಾರ ಘೋಷಣೆ, ಭ್ರಷ್ಟ ಸರ್ಕಾರವೆಂಬ ಆಕ್ರೋಶ ಹೊರ ಹಾಕಿದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣಗಳ ವಿರುದ್ಧ ಬಿಜೆಪಿ ಕೈಗೆತ್ತಿಕೊಂಡ ಹೋರಾಟ ತಿರುಗು ಬಾಣವಾದರೂ ಚಿಂತಿಸುವುದಿಲ್ಲ. ತಾರ್ಕಿಕ ಅಂತ್ಯ ಕಾಣಿಸುವ ತನಕ ಬಿಡುವುದಿಲ್ಲ ಎಂದು ಬಿ.ವೈ.ವಿಜಯೇಂದ್ರ ಗುಡುಗಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಗಿನಡಿಯೇ ಎರಡೂ ಅಕ್ರಮಗಳಾಗಿವೆ. ಅವರ ಗಮನಕ್ಕೆ ಬಾರದೆ ಅವ್ಯವಹಾರ ನಡೆಯದು. ಲೂಟಿಯೇ ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿದೆ. ಸಿಬಿಐ ತನಿಖೆಗೆ ಒಪ್ಪಿಸಲೇಬೇಕು. ಎಲ್ಲ ಭ್ರಷ್ಟಾಚಾರ ಪ್ರಕರಣಗಳು ತನಿಖೆಯಾಗಲೇಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು

 

 

Tags:

error: Content is protected !!