ಹೆಚ್ಡಿ ಕುಮಾರಸ್ವಾಮಿ ಶಾಸಕರಾಗಿದ್ದ ಚನ್ನಪಟ್ಟಣದಲ್ಲಿ ಜನರು ತಮ್ಮ ಕುಂದುಕೊರತೆಗಳ ಬಗ್ಗೆ 10 ಸಾವಿರ ಅರ್ಜಿಗಳನ್ನು ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು ಜನರ ಪರ ಕೆಲಸ ಮಾಡಿಲ್ಲ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಮಂಡ್ಯದ ಜನತಾದರ್ಶನದಲ್ಲಿ ಮೂರುವರೆ ಸಾವಿರ ಅರ್ಜಿಗಳನ್ನು ಸ್ವೀಕಾರ ಮಾಡಿದ್ದೇನೆ. ಸರ್ಕಾರ ಜನರ ಸಮಸ್ಯೆ ನಿವಾರಿಸುವಲ್ಲಿ ವಿಫಲಾಗಿದೆ. ಸಚಿವರು, ಶಾಸಕರು ಕೆಲಸ ಮಾಡಿಲ್ಲ” ಎಂದು ಕುಮಾರಸ್ವಾಮಿ ಅವರು ಮಾಡಿರುವ ಆರೋಪದ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೀಗೆ ತಿರುಗೇಟು ಕೊಟ್ಟರು.
“ಕುಮಾರಸ್ವಾಮಿ ಅವರು ಏನೋ ಒಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ತಮ್ಮ ಸಮಸ್ಯೆಗಳ ನಿವಾರಣೆಗೆ ಚನ್ನಪಟ್ಟಣದ ಜನರು ಸಾವಿರಾರು ಅರ್ಜಿ ಕೊಟ್ಟಿರುವುದಕ್ಕೆ ನಮ್ಮ ಬಳಿ ದಾಖಲೆಗಳಿವೆ. ದೂರವಾಣಿ ಸಂಖ್ಯೆಯಿದೆ. ಇದಕ್ಕೆ ಏನು ಹೇಳಬೇಕು” ಎಂದು ಮರು ಪ್ರಶ್ನಿಸಿದರು. ಕುಮಾರಸ್ವಾಮಿ ಒಬ್ಬರೇ ರಾಜಕಾರಣ ಮಾಡುತ್ತಿದ್ದಾರಾ? ನಮಗೂ ರಾಜಕಾರಣ ಬರುತ್ತದೆ. ಆದರೆ ನಮಗೆ ರಾಜಕಾರಣ ಮುಖ್ಯವಲ್ಲ, ಜನರ ಸೇವೆ ಮುಖ್ಯ. ಆದ ಕಾರಣ ಈ ಕಾರ್ಯಕ್ರಮ ಮಾಡುತ್ತಿದ್ದೇವೆ” ಎಂದು ತಿವಿದರು .