ಕೊಂಕಣ ಘಟ್ಟ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ತಾಲೂಕಿನ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಜುಲೈ ಅಂತ್ಯದವರೆಗೆ ಇದೇ ಪರಿಸ್ಥಿತಿ ಮುಂದುವರೆದರೆ ಕೃಷ್ಣಾ ನದಿಗೆ ಪ್ರವಾಹ ಭೀತಿ ಎದುರಾಗಲಿದ್ದು, ಎಲ್ಲ ಅಧಿಕಾರಿಗಳು ಸಂಭಾವ್ಯ ಪ್ರವಾಹ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡು ಅಲರ್ಟ ಆಗಿ ಇರುವಂತೆ ಚಿಕ್ಕೋಡಿ ಕೃಷಿ ನಿರ್ದೇಶಕರು ಹಾಗೂ ಕಾಗವಾಡ ತಾಲೂಕಾ ನೋಡಲ್ ಅಧಿಕಾರಿ ಎಚ್.ಡಿ.ಕೋಳೆಕರ ಅವರು ಎಚ್ಚರಿಕೆ ನೀಡಿದ್ದಾರೆ.
ಗುರುವಾರದಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಭಾವ್ಯ ಪ್ರವಾಹ ಮುನ್ನಚ್ಚರಿಕೆ ಕುರಿತು ತಾಲೂಕಿನ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದರು. ಕಾಗವಾಡ ತಾಲೂಕಿನ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಗ್ರಾಮಗಳ ನೊಡಲ್ ಅಧಿಕಾರಿಗಳು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು ಎಚ್ಚರವಹಿಸಬೇಕೆಂದು ತಿಳಿಸಿದರು.
ತಹಶೀಲ್ದಾರ ರಾಜೇಶ ಬುರ್ಲಿ ಮಾತನಾಡಿ, ಇಲ್ಲಿಯ ವರೆಗೆ ಕಾಗವಾಡ ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದಿಲ್ಲ. ಆದರೂ ಸಹಿತ ಪಿಡಿಓ, ಸ್ಥಳೀಯ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದರು. ಈ ಕುರಿತು ತಾಲೂಕಾ ಆರೋಗ್ಯಾಧಿಕಾರಿ ಡಾ. ಬಸಗೌಡಾ ಕಾಗೆ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಎ ಓ ವಿರಣ್ಣಾ ವಾಲಿ ಪ್ರವಾಹ ಮತ್ತು ಡೆಂಗ್ಯೂ ಕುರಿತು ಸಲಹೆ ಸೂಚನೆಗಳನ್ನು ನೀಡಿದರು. ಈ ವೇಳೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ಧರು.