ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಅಡ್ಡಲಾಗಿ ಕಟ್ಟಲಾಗಿರುವ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಜಲಾಶಯ ಭರ್ತಿಗೂ ಮುನ್ನವೇ ನಾರಾಯಣಪುರ ಜಲಾಶಯಕ್ಕೆ ನೀರು ಬಿಡಲು ಆರಂಭಿಸಲಾಗಿದೆ .
ಶನಿವಾರ 3,980 ಕ್ಯುಸೆಕ್ ನೀರನ್ನು ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ. ಒಂದು ವೇಳೆ ಒಳಹರಿವು ಹೆಚ್ಚಾದರೆ ಮಾತ್ರ ಹೊರಹರಿವನ್ನು 7,500 ಕ್ಯುಸೆಕ್ ಗೆ ಹೆಚ್ಚಿಸಲಾಗುವುದು’ ಎಂದು ಆಲಮಟ್ಟಿ ಜಲಾಶಯದ ಮೂಲಗಳು ತಿಳಿಸಿವೆ. 519.60 ಮೀ ಎತ್ತರದ ಜಲಾಶಯದಲ್ಲಿ ಶನಿವಾರ 517.34 ಮೀ ವರೆಗೆ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 88 ಟಿಎಂಸಿ ನೀರು ಸಂಗ್ರಹವಿದೆ.
ಆಲಮಟ್ಟಿ ಹೊರಹರಿವು ಆರಂಭಿಸಿರುವುದರಿಂದ ಕೆಲ ದಿನಗಳಿಂದ ಬಂದಿದ್ದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರ ಆರಂಭಗೊಂಡಿದೆ. ನೀರನ್ನು ಹೊರ ಬಿಡುತ್ತಿರುವದರಿಂದ ಕೃಷ್ಷಾ ತೀರದ ಜನತೆ ಹಾಗೂ ರೈತರು ಎಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ತಿಳಿಸಲಾಗಿದೆ.