ಜುಲೈ 31ರ ವರೆಗೆ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣಾ ಸಮಿತಿ ಶಿಫಾರಸ್ಸನ್ನು ಸರ್ವಪಕ್ಷ ಸಭೆಯಲ್ಲಿ ತಿರಸ್ಕರಿಸಲಾಯಿತು. ಶಿಫಾರಸು ಕುರಿತು ಮರುಪರಿಶೀಲನೆ ನಡೆಸುವಂತೆ ಮೇಲ್ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇತ್ತೀಚೆಗಷ್ಟೇ ಕಾವೇರಿ ನೀರು ನಿಯಂತ್ರಣಾ ಸಮಿತಿ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಬಿಡಲು ಶಿಫಾರಸು ಮಾಡಿತ್ತು. ಈ ಸಂಬಂಧ ತೀರ್ಮಾನ ಕೈಗೊಳ್ಳಲು ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿತ್ತು.
ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಮಿತಿ ಆದೇಶಕ್ಕೆ ವಿರುದ್ಧವಾಗಿ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧರಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸಭೆ ಆರಂಭಗೊಂಡ ನಂತರ ಮೊದಲಿಗೆ ಕಾವೇರಿ ತಾಂತ್ರಿಕ ಸಮಿತಿ, ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ ನೀರಿನ ಸಂಗ್ರಹ, ಒಳ ಹರಿವು, ಮಳೆಯ ಪ್ರಮಾಣದ ಕುರಿತ ವರದಿ ನೀಡಿತು. ಸಭೆಯಲ್ಲಿ 4 ಜಲಾಶಯದ ನೀರಿನ ಸಂಗ್ರಹದ ಮಾಹಿತಿ ನೀಡಿದ ಅಧಿಕಾರಿಗಳು, ಹಾರಂಗಿಯಲ್ಲಿ 76%, ಹೇಮಾವತಿಯಲ್ಲಿ 56%, ಕೆ ಆರ್ಎಸ್ ಯಲ್ಲಿ 54% ಹಾಗೂ ಕಬಿನಿ-96% ನೀರು ಇದೆ ಎಂಬ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದಿತು. ವರದಿ ಆಧರಿಸಿ ಸರ್ವಪಕ್ಷಗಳೊಂದಿಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಿಂದ ಅಷ್ಟು ಪ್ರಮಾಣದ ನೀರನ್ನು ಬಿಡಲು ಅಸಾಧ್ಯ ಎಂದು ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡಿಸಿದವು, ಮುಂಚೆಯಿಂದಲೂ ಕೇಳಿದಷ್ಟು ನೀರು ಬಿಟ್ಟು ಅಭ್ಯಾಸ ಮಾಡಿಬಿಟ್ಟಿದ್ದೀರಿ. ಪ್ರತೀ ಸಲವೂ ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಕಾವೇರಿ ನೀರು ನಿಯಂತ್ರಣಾ ಮಂಡಳಿಗಳ ಆದೇಶ ಜಾರಿ ಮಾಡಿದ್ರಿ. ಸರ್ಕಾರದ ಈ ನಡೆಯಿಂದ ನಮ್ಮ ನೀರು ತಮಿಳುನಾಡಿಗೆ ಹರಿದುಹೋಯ್ತು. ನಮ್ಮ ರೈತರಿಗೆ ಸಮಸ್ಯೆ ಆದರೂ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ನಮ್ಮ ದನಿ, ರೈತರ ದನಿ ನೀವು ಕೇಳಿಸಿಕೊಳ್ಳಲೇ ಇಲ್ಲ ಎಂದು ವಿಪಕ್ಷ ನಾಯರು ಆರೋಪಿಸಿದರು.
ಬಳಿಕ ಸರ್ವಪಕ್ಷಗಳು ಸಿ ಡಬ್ಲ್ಯೂಆರ್ ಸಿ ಶಿಫಾರಸ್ಸನ್ನು ಮರು ಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಿದವು.