ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ(ಇಡಿ) ವಶಕ್ಕೆ ನೀಡಿ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ನಿನ್ನೆ ಡಾಲರ್ಸ್ ಕಾಲೋನಿಯಲ್ಲಿರುವ ನಾಗೇಂದ್ರ ಅವರ ಫ್ಲಾಟ್ ನಲ್ಲಿ ಇಡಿ ಅಧಿಕಾರಿಗಳು ಬಂಧಿಸಿ ಬೆಂಗಳೂರಿನ ಶಾಂತಿನಗರ ಕಚೇರಿಯಲ್ಲಿ ಸರಿಸುಮಾರು 22 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು. ನಿಯಮದಂತೆ ಆರೋಪಿಯೊಬ್ಬರನ್ನು ವಶಕ್ಕೆ ಪಡೆದ ನಂತರ 24 ಗಂಟೆಯೊಳಗೆ ನ್ಯಾಯಾಲಯ ಇಲ್ಲವೇ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕು. ಅದರಂತೆ ಇಡಿ ಅಧಿಕಾರಿಗಳು ಶನಿವಾರ ಮುಂಜಾನೆ ಯಲಹಂಕದಲ್ಲಿರುವ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಮೂರ್ತಿ ಗಜಾನನ ಭಟ್ ಅವರ ಮುಂದೆ ಹಾಜರುಪಡಿಸಿದರು.
ಮೊದಲು ಆರೋಪಿ ನಾಗೇಂದ್ರ ಅವರನ್ನು 14 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಕೋರಿದರು. ಅಂತಿಮವಾಗಿ ನ್ಯಾಯಾಲಯ ಆರು ದಿನಗಳ ಕಾಲ ವಶಕ್ಕೆ ನೀಡಿ ಆದೇಶ ನೀಡಿತು. ಪುನಃ ಅಂದರೆ ಜುಲೈ 18ರಂದು ತಮ ಮುಂದೆ ಹಾಜರುಪಡಿಸಬೇಕೆಂದು ಇಡಿ ಅಧಿಕಾರಿಗಳಿಗೆ ನ್ಯಾಯಾಧೀಶರು ನಿರ್ದೇಶನ ನೀಡಿದರು.
ಈ ವೇಳೆ ಆರೋಪಿ ಸ್ಥಾನದಲ್ಲಿರುವ ನಾಗೇಂದ್ರ ಅವರು ತಮಗೆ ಆರೋಗ್ಯದ ಸಮಸ್ಯೆ ಇರುವುದನ್ನು ನ್ಯಾಯಮೂರ್ತಿಗಳ ಮುಂದೆ ಹೇಳಿಕೊಂಡರು. ಬಿಪಿ, ಆಯಾಸ ಇದೆ ಎಂದು ನ್ಯಾಯಮೂರ್ತಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಪ್ರತಿದಿನ ಮೂರು ಗಂಟೆ ಮಾತ್ರ ವಿಚಾರಣೆ ನಡೆಸಬಹುದು. ವಿಚಾರಣೆಯ ನಂತರ 30 ನಿಮಿಷಗಳ ಕಾಲ ವಿಶ್ರಾಂತಿ ನೀಡಬೇಕು. ಅಲ್ಲದೆ ಅವರಿಗೆ ಪ್ರತಿದಿನ ವೈದ್ಯಕೀಯ ತಪಾಸಣೆ ಗೊಳಪಡಿಸಬೇಕೆಂದು ಇಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ವೇಳೆ ನಾಗೇಂದ್ರ ನ್ಯಾಯಾಧೀಶರ ಮುಂದೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ನಿಯಮದಂತೆಯೇ ಸಚಿವನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಹಣ ವರ್ಗಾವಣೆಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಅಳಲು ತೋಡಿಕೊಂಡರು. ಅಂತಿಮವಾಗಿ ನ್ಯಾಯಾಲಯ ಆರು ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶಿಸಿ ಇದೇ 18ರಂದು (ಗುರುವಾರ) ಬೆಳಗ್ಗೆ 11.30ಕ್ಕೆ ಹಾಜರುಪಡಿಸಬೇಕೆಂದು ನಿರ್ದೇಶನ ನೀಡಿದರು.