ಪ್ರತಿನಿಧಿ/ನವದೆಹಲಿ: ವಾರಕರಿ ಸಂಪ್ರದಾಯದವರು ಫಂಡರಪುರ ವಾರಿಗೆ ಹೋಗುವ ಹಿನ್ನೆಲೆಯಲ್ಲಿ ಫಂಡರಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಯಶವಂತಪುರ -ಫಂಡರಾಪುರ ಎಕ್ಸಪ್ರೆಸ್ ರೈಲನ್ನು (ಸಂಖ್ಯೆ-16541) ವಾರಕ್ಕೊಮ್ಮೆ ಬದಲಾಗಿ ಜೂನ್ 25ರಿಂದ ಜುಲೈ 30ರ ವರೆಗೆ ಪ್ರತಿ ನಿತ್ಯ ಸಂಚರಿಸುವಂತೆ ಮಾಡಬೇಕೆಂದು ಉತ್ತರ ಕನ್ನಡ ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿದ ಮನವಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಂದಿಸಿದ್ದಾರೆ.
ನವದೆಹಲಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಚಿವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದರು. ಜೂನ್ 25ರಿಂದ ಜುಲೈ 30ರ ವರೆಗೆ ರೈಲು ಪ್ರತಿ ದಿನ ಚಲಿಸಿದರೆ ಅಪಾರ ಸಂಖ್ಯೆಯ ಯಾತ್ರಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಆದ್ದರಿಂದ ಈ ಮನವಿಯನ್ನು ಪರಿಗಣಿಸಿ ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ನಿತ್ಯ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ವಿನಂತಿಸಿದರು.
ತಕ್ಷಣ ಸ್ಪಂದಿಸಿದ ಸಚಿವ ಅಶ್ವಿನಿ ವೈಷ್ಣವ್, ಈ ಬಗ್ಗೆ ಕೂಡಲೆ ಪರಿಶೀಲಿಸಿ ನಿತ್ಯ ರೈಲು ಓಡಿಸಲು ಕ್ರಮ ಕೈಗೊಳ್ಳಲಾಗುವುದು. ಒಂದೊಮ್ಮೆ ಅದೇ ರೈಲನ್ನು ನಿತ್ಯ ಓಡಿಸಲು ಸಾಧ್ಯವಾಗದಿದ್ದಲ್ಲಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಸಚಿವರ ಈ ಭರವಸೆಯಿಂದಾಗಿ ಫಂಡರಾಪುರ ವಿಠ್ಠಲ ಭಕ್ತರಿಗೆ ಅನುಕೂಲವಾದಂತಾಗಿದೆ. ನಿಟ್ಟೂರಿನ ರಮೇಶ್ ಎಸ್ ನಾರ್ವೇಕರ್ ಮತ್ತು ಖಾನಾಪುರದ ಶಾಂತಾರಾಮ ಗಂಗಾರಾಮ ಹೆಬ್ಬಾಳ್ಕರ್ ಅವರು, ಹುಬ್ಬಳ್ಳಿಯಿಂದ ಫಂಡರಪುರಕ್ಕೆ ರೈಲು ಸೇವೆಯ ಸಮಸ್ಯೆಯ ಕುರಿತು ವಾರಕರಿಯ ಸಂಪ್ರದಾಯದ ಜನರ ಪರವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಕಾಗೇರಿ ಅವರು ಕೇಂದ್ರ ಸಚಿವರನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡಿ, ರೈಲಿನ ಅಗತ್ಯತೆಯನ್ನು ಮನದಟ್ಟು ಮಾಡಿದರು. ತಮ್ಮ ಮನವಿಗೆ ಸ್ಪಂದಿಸಿದ ಸಚಿವರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಧನ್ಯವಾದ ಸಲ್ಲಿಸಿದ್ದಾರೆ.