ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ 37ನೇ ವಾರ್ಷಿಕ ಘಟಿಕೋತ್ಸವ ಇಂದು ನಡೆದಿದ್ದು, ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.
ಕೃಷಿ ವಿವಿಯ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಘಟಿಕೋತ್ಸವ ಕಾರ್ಯಕ್ರಮ ಜರುಗಿದ್ದು, ಈ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಕೃಷಿ ಸಚಿವ ಚೆಲುವರಾಯಸ್ವಾಮಿ, ದೆಹಲಿಯ ಕೃಷಿ ವಿಜ್ಞಾನಿಗಳ ನೇಮಕಾತಿ ಕೇಂದ್ರ ಅಧ್ಯಕ್ಷ ಸಂಜಯ್ಕುಮಾರ್ ಕೂಡ ಸಾಕ್ಷಿಯಾದರು. ಅತಿಥಿಗಳನ್ನು ಸಂಪ್ರದಾಯದಂತೆ ಸಭಾಭವನಕ್ಕೆ ಕರೆತರಲಾಯಿತು. ಅಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲರು ಘಟಿಕೋತ್ಸವ ಆರಂಭಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ವಿವಿಧ ವಿಷಯಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಮತ್ತು ಕೃಷಿ ಸಚಿವರು ಚಿನ್ನದ ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಣೆ ಮಾಡಿದರು. ಜತೆಗೆ 69 ಪಿಎಚ್ಡಿ, 237 ಸ್ನಾತಕೋತ್ತರ ಹಾಗೂ 627 ಸ್ನಾತಕ ಪದವಿಗಳು ಸೇರಿ ಒಟ್ಟು 933 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕೃಷಿ ವಿಶ್ವವಿದ್ಯಾಲಯದಿಂದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದ್ದು, ಈ ಘಟಿಕೋತ್ಸವದಲ್ಲಿ ಸೋಮನಾಥ್ ಅವರು ಗೈರಾಗಿದ್ದಕ್ಕೆ ಅವರ ಅನುಪಸ್ಥಿತಿಯಲ್ಲಿ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದರು.