ಚಿಕ್ಕೋಡಿ: ಸಾವಿರಾರು ಜನರ ಮಧ್ಯದಲ್ಲಿ ಗುಗ್ಗುಳೋತ್ಸವ, ನಂದಿಕೋಲು ಕುಣಿತ, ಗೊಂಬೆ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಕೋಲಾಟ, ಆಶ್ವಕುಣಿತ ಸೇರಿದಂತೆ ವಿವಿಧ ವಾದ್ಯಮೇಳಗಳಿಂದ ಕೂಡಿದ ಮೇರವಣಿಗೆಯೊಂದಿಗೆ ಜೊಲ್ಲೆ ಗ್ರುಪ್‌ದಿಂದ ಆಯೋಜಿಸಲಾದ ಪ್ರೇರಣಾ ಉತ್ಸವಕ್ಕೆ ಬುಧವಾರರಂದು ಅಧ್ಧೂರಿ ಚಾಲನೆ ದೊರಕಿತು.
ಯಕ್ಸಂಬಾ ಪಟ್ಟಣದ ಮಹಾದೇವ ಮಂದಿರದಿಂದ, ಬಸವವೃತ್ತದಿಂದ ನಣದಿಯ ಜೊಲ್ಲೆ ಗ್ರುಪ್ ಸಂಸ್ಥೆಯ ಶಾಲಾ ಆವರಣದಲ್ಲಿರುವ ಜ್ಯೋತಿಬಾ ಮಂದಿರದವರೆಗೆ ಉತ್ಸವದ ಭವ್ಯ ಮೇರವಣಿಗೆ ವಿಜೃಂಭಣೆಯಿಂದ ನಡೆಯಿತು. ಮೇರವಣಿಗೆಯಲ್ಲಿ ಗೊಂಬೆ ಕುಣಿತ, ಹೆಜ್ಜೆ ಕುಣಿತ, ಡೊಳ್ಳುಕುಣಿತ ಸೇರಿದಂತೆ ವಿವಿಧ ಗ್ರಾಮದ ನಂದಿಕೋಲುಗಳು, ಅಡ್ಡಪಲ್ಲಕ್ಕಿ , ಕುದುರೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾಮೇಳಗಳು ಉತ್ಸವದ ಉದ್ಘಾಟನಾ ಮೇರವಣಿಗೆಗೆ ಮೆರಗು ತಂದವು. ಇದೇ ಸಂದರ್ಭದಲ್ಲಿ ನಡೆದ ಗಡಿಭಾಗದ ಆರಾಧ್ಯ ದೈವ ಶ್ರೀ ಜ್ಯೋತಿಬಾ ಮೂರ್ತಿಯ ಮೇರವಣಿಗೆಯಲ್ಲಿ ಯಕ್ಸಂಬಾ, ಉಳಾಗಡ್ಡಿವಾಡಿ, ಸದಲಗಾ, ಯಾದ್ಯಾನವಾಡಿ, ನಣದಿವಾಡಿ ಸೇರಿದಂತೆ ಅನೇಕ ಗ್ರಾಮದ ನಂದಿಕೋಲುಗಳು ಭಾಗವಹಿಸಿ ಭಕ್ತರ ಹೆಗಲಮೇಲೆ ಅನೇಕ ತಾಳದಲ್ಲಿ ಕುಣಿದವು. ಜ್ಯೋತಿಬಾ ದೇವರ ಮೂರ್ತಿ ಯ ಅಡ್ಡಪಲ್ಲಕ್ಕಿ ದರ್ಶನವನ್ನು ನೆರೆದ ಭಕ್ತರು ಪಡೆದುಕೊಂಡರು.
ಗುಗ್ಗಳೋತ್ಸವದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಚಿಕ್ಕೋಡಿಯ ಸಂಸದರಾದ ಜೊಲ್ಲೆ ಗ್ರುಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಪ್ರೇರಣಾ ಉತ್ಸವದ ರೂವಾರಿ ಜ್ಯೋತಿಪ್ರಸಾದ ಅಣ್ಣಾಸಾಹೆಬ ಜೊಲ್ಲೆ, ಪ್ರೀಯಾ ಜೊಲ್ಲೆ, ಯುವಧುರೀಣ ಬಸವಪ್ರಸಾದ ಜೊಲ್ಲೆ ಹಾಗೂ ಕಾಗವಾಡದ ಶ್ರೀ ಯತಿಶ್ವರಾನಂದ ಮಹಾಸ್ವಾಮೀಜಿ, ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಪ್ರಥಮ ಪೂಜೆ ಸಲ್ಲಿಸಿ ಉತ್ಸವದ ಮೇರವಣಿಗೆಗೆ ಚಾಲನೆ ನೀಡಿದರು.
ಕಾಗವಾಡದ ಯತಿಶ್ವರಾನಂದ ಮಹಾಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಮಹಾಸ್ವಾಮೀಜಿ ದೀಪ ಬೆಳಗುಸುವ ಮೂಲಕ ಪ್ರೇರಣಾ ಉತ್ಸವಕ್ಕೆ ಚಾಲನೆ ನೀಡಿದರು. ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ನಿಪ್ಪಾಣಿಯ ಶಾಸಕಿ ಶಶಿಕಲಾ ಜೊಲ್ಲೆ, ಆಶಾಜ್ಯೋತಿ ವಿಶೇಷ ಮಕ್ಕಳ ವಸತಿ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಪ್ರೀಯಾ ಜೊಲ್ಲೆ ಹಾಗೂ ಬಸವಜ್ಯೋತಿ ಯೂಥ್ ಫೌಂಡೆಷನ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ವಿಜಯ ರಾವುತ್, ಕಲ್ಲಪ್ಪಾ ಜಾಧವ, ಅಪ್ಪಾಸಾಹೇಬ ಜೊಲ್ಲೆ, ಜಯಾನಂದ ಜಾಧವ ಸೇರಿದಂತೆ ಮುಂತಾದವರು ಇದ್ದರು. ಉತ್ಸವಕ್ಕೆ ಆಗಮಿಸಿದ ಎಲ್ಲ ಯಕ್ಸಂಬಾ ಹಾಗೂ ಸುತ್ತಮುತ್ತಲಿನ ಸದ್ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಸಂಧರ್ಬದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ಸದ್ಯಸರು, ಜೊಲ್ಲೆ ಗ್ರುಪ್ ಸಿಬ್ಬಂಧಿ ವರ್ಗ, ವಿವಿಧ ಅಂಗಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ರಂಗು ರಂಗೀನ ರಂಗೋಲಿ ಸ್ಪರ್ಧೆ: ಕಾರ್ಯಕ್ರಮದಂಗವಾಗಿ ಬೆಳಿಗ್ಗೆ ಆಯೋಜಿಸಲಾಗಿದ್ದ ಮನೆ ಅಂಗಳದಿ ರಂಗೋಲಿ ಸ್ಪರ್ಧೆಯ ಅಂಗವಾಗಿ ಯಕ್ಸಂಬಾ ಪಟ್ಟಣದ ಮನೆ ಮನೆಯ ಮುಂದೆ ಬೀದಿ ಬೀದಿಗಳಲ್ಲಿ ರಂಗೋಲಿ ಹಾಕಲಾಗಿದ್ದವು. ರಂಗು ರಂಗೀನ ರಂಗೋಲಿಯಲ್ಲಿ ರಂಗಾದ ಯಕ್ಸಂಬಾ ಪಟ್ಟಣದ ಬೀದಿಗಳು ಕೇದಾರಲಿಂಗ ದೇವರ ಮೂರ್ತಿ ಸ್ವಾಗತಕೋರುತ್ತಿದ್ದಂತೆ ಗೋಚರಿಸಿದವು. ಉತ್ಸವ ಅಂಗವಾಗಿ ಶಾಲಾ ಮಕ್ಕಳಿಗಾಗಿ ವಚನ ಸ್ಪರ್ಧೆ ಮತ್ತು ಮಗ್ಗಿ ಕಂಠ ಪಾಠ ಸ್ಪರ್ಧೆ, ಸಮೂಹ ಗಾಯನ ಸ್ಪರ್ಧೆ, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದವು.
ಗುಗ್ಗುಳೋತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.