ದಾವಣಗೆರೆ : ಹಣದ ವಿಚಾರವಾಗಿ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯಕಂಡಿದ್ದ ಘಟನೆಗೆ ಸಂಬಂಧಿಸಿದಂತೆ ಕೊಲೆ ನಡೆದು 48 ಗಂಟೆಯಲ್ಲಿಯೇ ಆರೋಪಿಯನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಶ್ವಾನ ‘ತಾರಾ’ ಯಶಸ್ವಿಯಾಗಿದೆ. ದಾವಣಗೆರೆ ಹೊರ ವಲಯದ ಶ್ರೀರಾಮನಗರದ ನಿವಾಸಿ ಶಿವಯೋಗೀಶ ಅಲಿಯಾಸ್ ಯೋಗಿ (32 ವರ್ಷ) ಬಂಧಿತ ಆರೋಪಿ. ತಾಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿ ನರಸಿಂಹ (26 ವರ್ಷ)ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಶ್ವಾನ ‘ತಾರಾ’ ಸುಮಾರು 8 ಕಿಮೀ ದೂರದವರೆಗೆ ಹುಡುಕಿಕೊಂಡು ಹೋಗಿ, ನೀಡಿದ ಸುಳಿವನ್ನು ಆಧರಿಸಿ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸ್ ಡಾಗ್ ತಾರಾ ಕಾರ್ಯಕ್ಷಮತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.