ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರು ಕೊಪ್ಪಳದಲ್ಲಿಂದು ಬಿಜೆಪಿ ಕಾರ್ಯಾಲಯ ಕಟ್ಟಡದ ಉದ್ಘಾಟನೆ ಹಾಗೂ ಮೂರು ಜಿಲ್ಲೆಗಳಲ್ಲಿ ಜಿಲ್ಲಾ ಕಾರ್ಯಾಲಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದರು.
ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಶ್ಮೀರದ ಲಾಲ್ ಚೌಕ್ನಲ್ಲಿ ತಿರಂಗ ಹಾರಾಟವಾಗಿದೆ. ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಿಸುತ್ತಿದ್ದೇವೆ. ಈ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಕೊಪ್ಪಳದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಹೇಳಿದರು.
ಈ ಹಿಂದೆ ಕಾರ್ಯಕರ್ತರ ಮನೆಯಿಂದ ನಮ್ಮ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಇಂದು ಪ್ರತಿ ಜಿಲ್ಲೆಯಲ್ಲಿ ಸ್ವಂತ ಕಟ್ಟಡ ಹೊಂದುವ ದಿನಗಳು ಒದಗಿಬಂದಿವೆ. ಮೋದಿ ಅಧಿಕಾರಕ್ಕೆ ಬಂದ ಕೂಡಲೇ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಕಾರ್ಯಾಲಯ ನಿರ್ಮಾಣ ಆಗಬೇಕು ಎಂದು ಯೋಜನೆ ರೂಪಿಸಲಾಗಿತ್ತು. ಅದರಂತೆ ಇಂದು ಎಲ್ಲವೂ ನಡೆಯುತ್ತಿವೆ ಎಂದರು.
ಜಗತ್ತಿನ ಪ್ರಬಲ ದೇಶಗಳು ಇಂದು ಜಿ 20ರ ನೇತೃತ್ವವನ್ನು ಭಾರತಕ್ಕೆ ನೀಡಿವೆ. ಒಂದು ವರ್ಷಗಳ ಕಾಲ ನರೇಂದ್ರ ಮೋದಿ ಅದರ ಅಧ್ಯಕ್ಷರಾಗಿರಲಿದ್ದಾರೆ. ಕರ್ನಾಟಕದ ಬೆಂಗಳೂರಿನಲ್ಲಿ ಜಿ20 ಸಭೆಗಳು ನಡೆಯಲಿವೆ. ಆ ಮೂಲಕ ಕರ್ನಾಟಕವು ಹಲವು ದೇಶಗಳಿಗೆ ಅತಿಥಿ ಸತ್ಕಾರ ನೀಡಲಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ ಪರ ಕೆಲಸಗಳ ಆಧಾರದ ಮೇಲೆ ಜನರ ಮತ ಪಡೆದು ರಾಜ್ಯದಲ್ಲಿ ಮೊತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶ ಮೊದಲು ಎಂಬುವುದು ಬಿಜೆಪಿ ತತ್ತ್ವವಾಗಿದೆ. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅದನ್ನ ಸಾಬೀತು ಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಬಿಜೆಪಿ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯ ಸಕಾರಾತ್ಮಕ ಚಿಂತನೆಗೆ ಜನರು ಮಾರು ಹೋಗಿದ್ದಾರೆ. 2023ರ ಚುನಾವಣೆಯಲ್ಲಿ ಮೋದಿ ನಾಯಕತ್ವ, ನಡ್ಡಾ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಸಿಎಂ ಇದೇ ವೇಳೆ ಘೋಷಣೆ ಮಾಡಿದರು.