ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ್ದ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಕಿಡಿಕಾರಿದ್ದಾರೆ. ಈಶ್ವರಪ್ಪನವರನ್ನು ಹಾಗೇ ಬಿಟ್ಟರೆ ಇವರು ಭಾರತದ ಹೆಸರನ್ನೇ ಬದಲಾವಣೆ ಮಾಡುತ್ತಾರೆ ಎಂದಿದ್ದಾರೆ.
ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ, ದೆಹಲಿಯ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇನೆ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಇನ್ನು ಸುಮ್ಮನಿದ್ದರೆ ನಾಳೆ ಭಾರತದ ಹೆಸರು ಬದಲಾವಣೆ ಮಾಡುತ್ತಾರೆ. ಹಾಗಾಗಿ ಈಶ್ವರಪ್ಪನವರನ್ನು ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿದರು.
ಇನ್ನು ಇದೇ ವೇಳೆ ಹಿಜಾಬ್-ಕೇಸರಿಶಾಲು ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲ ವಿದ್ಯಾರ್ಥಿಗಳಿಗೆ ಮೊದಲು ಕೇಸರಿ ಶಾಲು ಯಾಕೆ ಹಾಕಿದ್ದೇವ ಎಂದು ಗೊತ್ತಾಗುವುದಿಲ್ಲ. ಆಮೇಲೆ ತಿಳಿದ ಮೇಲೆ ಪರೀಸ್ಥಿತಿ ತಿಳಿಯಾಗುತ್ತದೆ. ಈಗ ಈ ವಿಚಾರ ಕುರಿತಂತೆ ವಿದ್ಯಾರ್ಥಿಗಳ ನಡುವೆ ಘರ್ಷಣೆಯಾಗುತ್ತಿದೆ.
ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮಧ್ಯಸ್ಥಿಕೆ ವಹಿಸಿ ಈ ವಿವಾದವನ್ನು ಬಗೆಹರಿಸಬೇಕು. ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಮನಸ್ತಾಪ ಮೂಡಬಾರದು. ಈ ರೀತಿಯಲ್ಲಿ ಸರಕಾರ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದರು.
ಇನ್ನು ಈಶ್ವರಪ್ಪ ಹೆಳಿಕೆಗೆ ಕಾಂಗ್ರೆಸ್ ಸದನದ ಒಳಗೆ ಹಾಗೂ ಹೊರಗೆ ವಿರೋಧ ವ್ಯಕ್ತಪಡಿಸುತ್ತಿದೆ. ಈಶ್ವರಪ್ಪನವರನ್ನು ಸರಕಾರದಿಂದ ವಜಾ ಮಾಡಬೇಕೆಂದು ಒತ್ತಾಯ ಕೇಳಿಬಂದಿದ. ಈ ಕುರಿತಂತೆ ಸರಕಾರ ನಡೆ ಏನು ಎಂದು ಕಾದು ನೋಡಬೇಕಿದೆ.