ಹಿಜಾಬ್ ಬಗ್ಗೆ ಹೈಕೋರ್ಟ ಕೇವಲ ಕಾಲೇಜಿಗೆ ಸಂಬಂಧಿಸಿದಂತೆ ಮಾತ್ರ ಮಧ್ಯಂತರ ತೀರ್ಪು ಕೊಟ್ಟಿದೆ. ಆದರೆ ಸರ್ಕಾರ ಹೈಸ್ಕೂಲ್‍ನಲ್ಲಿಯೂ ಹೈಕೋರ್ಟ ಆದೇಶವನ್ನು ಪಾಲಿಸಲು ಮುಂದಾಗಿರುವುದು ಸರಿಯಲ್ಲ ಎಂದು ಸದನದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಪ್ರಶ್ನಿಸಿದರು.

ಮಂಗಳವಾರ ಎರಡನೇ ದಿನದ ವಿಧಾನಮಂಡಲ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ಹಿಜಾಬ್ ಬಗ್ಗೆ ಕಾಂಗ್ರೆಸ್ ಸದಸ್ಯರ ಯು.ಟಿ.ಖಾದರ್ ಪ್ರಸ್ತಾಪ ಮಾಡಿದರು. ಶಾಲಾ-ಕಾಲೇಜುಗಳಲ್ಲಿ ಸಧ್ಯ ಇರುವ ವಾತಾವರಣದಿಂದ ಸಾಕಷ್ಟು ನೋವಾಗುತ್ತಿದೆ. ಇದರ ಬಗ್ಗೆ ಕೋರ್ಟನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಇದರ ಬಗ್ಗೆ ಪ್ರಸ್ತಾಪ ಮಾಡಲು ಹೋಗೋದಿಲ್ಲ. ಆದರೆ ನಿನ್ನೆ ಕೆಲ ಮಾಧ್ಯಮಗಳಲ್ಲಿ ನಾವು ನೋಡಿದ್ದೇವೆ. ಶಿವಮೊಗ್ಗದಂತಹ ಜಿಲ್ಲೆಗಳಲ್ಲಿ ಹೈಸ್ಕೂಲ್‍ನ ಪೂರ್ವ ಸಿದ್ಧತಾ ಪರೀಕ್ಷೆಗೆ ಕುಳಿತುಕೊಳ್ಳಲು ಕೆಲವು ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿಲ್ಲ.

ಕೋರ್ಟ ಕೊಟ್ಟಿರುವ ಅದೇಶದ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲ ಉಂಟಾಗುತ್ತಿದೆ. ಬಹಳ ಸ್ಪಷ್ಟವಾಗಿ ಕೋರ್ಟ ಕಾಲೇಜು ಎಂದು ಹೇಳಿದೆ. ಆದರೆ ಕೋರ್ಟ ಆದೇಶವನ್ನು ಹೈಸ್ಕೂಲ್‍ನಲ್ಲಿ ಜಾರಿ ತರುವ ಬಗ್ಗೆ ಗೊಂದಲ ಸೃಷ್ಟಿಸಲಾಗುತ್ತಿದೆ. ಇನ್ನು ಈ ನಿಯಮ ವಿದ್ಯಾರ್ಥಿನಿಯರಿಗೆ ಅಂತಾ ಇದೆ, ಆದರೆ ಶಿಕ್ಷಕರು ಮತ್ತು ಸಿಬ್ಬಂದಿಗಳ ಮೇಲೆಯೂ ನಿಯಮ ಹೇರಲಾಗುತ್ತಿದೆ. ನಮ್ಮ ಜವಾಬ್ದಾರಿ ಶಿಕ್ಷಣ ಕೊಡುವುದು. ಶಿಕ್ಷಣ ಮೊಟಕುಗೊಳಿಸುವುದಲ್ಲ, ಕೋರ್ಟ ಆದೇಶ ಏನಿದೆ ಅದನ್ನು ಸಮಪರ್ಕವಾಗಿ ತಳಮಟ್ಟದಲ್ಲಿ ಅನುಷ್ಠಾನಕ್ಕೆ ತಂದು ಉತ್ತಮ ವಾತಾವರಣ ನಿರ್ಮಾಣ ಮಾಡಿ, ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಯು.ಟಿ.ಖಾದರಸ್ ಅವರ ನೋಟಿಸ್‍ಗೆ ಶಿಕ್ಷಣ ಸಚಿವರ ಜೊತೆಗೆ ಮಾತನಾಡಿ ಉತ್ತರ ಕೊಡಿಸುತ್ತೇವೆ. ಇನ್ನು ಕೋರ್ಟ ಆದೇಶವನ್ನು ಪಾಲನೆ ಮಾಡಲು ಸರ್ಕಾರ ಬದ್ಧವಿದೆ ಎಂದು ಭರವಸೆ ನೀಡಿದರು.