ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ, ಕಲಾತಪಸ್ವಿ ರಾಜೇಶ್(89) ಇಂದು ನಮ್ಮೆಲ್ಲರನ್ನು ಅಗಲಿದ್ದಾರೆ. ಹಿರಿಯ ನಟನ ಅಗಲಿಕೆಯಿಂದ ಸ್ಯಾಂಡಲವುಡ್‍ನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಹೌದು ಕಿಡ್ನಿ ವೈಫಲ್ಯ, ತೀವ್ರ ಉಸಿರಾಟ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ರಾಜೇಶ್ ಮಧ್ಯರಾತ್ರಿ 2.20ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಕೆಲ ದಿನಗಳಿಂದ ರಾಜೇಶ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. 150ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶ್ ಅಭಿನಯಿಸಿದ್ದಾರೆ. 1960ರಲ್ಲಿ ‘ವೀರ ಸಂಕಲ್ಪ’ ಚಿತ್ರದ ಮೂಲಕ ರಾಜೇಶ್ ಚಂದನವನಕ್ಕೆ ಕಾಲಿಟ್ಟಿದ್ದರು. ವೃತ್ತಿ ಜೀವನದಲ್ಲಿ ಸುಮಾರು 150ಕ್ಕೂ ಅಧಿಕ ಚಿತ್ರಗಳಲ್ಲಿ ರಾಜೇಶ್ ನಟಿಸಿದ್ದಾರೆ. ರಾಜೇಶ್ ಇತ್ತೀಚೆಗೆ ನಟಿಸಿದ್ದು ಶ್ರೀನಿ ಅಭಿನಯಿಸಿ, ನಿರ್ದೇಶಿಸಿರುವ ಓಲ್ಡ್ ಮಾಂಕ್ ಚಿತ್ರದಲ್ಲಿ. ಈ ಚಿತ್ರ ಫೆಬ್ರವರಿ 25ರಂದು ತೆರೆಗೆ ಬರಲಿದೆ. ವಿದ್ಯಾರಣ್ಯಪುರದಲ್ಲಿರುವ ಅವರ ನಿವಾಸಕ್ಕೆ ರಾಜೇಶ್ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಬರಲಾಗಿತ್ತು. ಈ ವೇಳೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು.

ಇನ್ನು ಹಿರಿಯ ನಟ ರಾಜೇಶ್ ಅವರ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿ ಮಾತನಾಡಿದ್ದಾರೆ. ರಾಜೇಶ್ ಅವರ ನಟನೆ ಒಂದು ರೀತಿಯಲ್ಲಿ ಅತ್ಯಂತ ಪ್ರಬುದ್ಧತೆಯಿಂದ ಇತ್ತು. ಯಾವುದೇ ಪಾತ್ರ ಕೊಟ್ಟರು ನಿರರ್ಗಳವಾಗಿ ಮಾಡುತ್ತಿದ್ದರು. ಹಿರಿಯ ನಟರಾದರೂ ಕೂಡ ಅತ್ಯಂತ ಸರಳವಾಗಿ ಬದುಕು ನಡೆಸಿದ್ದರು. ಅವರ ಅಗಲಿಕೆಯಿಂದ ನಮ್ಮ ಕಲಾಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜೇಶ್ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಏರ್ಪಾಟು ಮಾಡಲಾಗಿದೆ. ಮಧ್ಯಾಹ್ನ 3.30ಕ್ಕೆ ಮೇಡಿ ಅಗ್ರಹಾರ ಲಕ್ಷ್ಮೀಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕರು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ದರ್ಶನ ಪಡೆಯಬಹುದು ಎಂದು ಖ್ಯಾತ ನಟ ಹಾಗೂ ರಾಜೇಶ್ ಅವರ ಅಳಿಯ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.