State

ಶಾಂತಿ ಕದಡುವ ಕೆಲಸ ಯಾರೂ ಮಾಡಬಾರದು: ಸಿಎಂ ಬೊಮ್ಮಾಯಿ

Share

ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ವಿಚಾರದಲ್ಲಿ ರಾಜ್ಯದಲ್ಲಿ ಯಾರೂ ಶಾಂತಿಗೆ ಭಂಗ ತರುವ ಕೆಲಸ ಮಾಡಬಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಶಾಲೆಯಲ್ಲಿ ಎರಡು ಕಡೆಯಿಂದಲೂ ಸಮಸ್ಯೆ ಉಂಟಾಗಿದೆ. ಇದರಿಂದ ಯಾರಿಗೂ ರಾಜಕೀಯ ಲಾಭ ಆಗಲ್ಲ. ಕೋರ್ಟ್ ತೀರ್ಪು ಏನು ಬರುತ್ತೋ ಕಾಯೋಣ. ಶಾಂತಿ ಕದಡುವ ಹೇಳಿಕೆ ಯಾರೂ ಕೊಡುವುದು ಬೇಡ. ನಮ್ಮಷ್ಟಕ್ಕೆ ನಾವೇ ನಿಯಂತ್ರಣ ಹಾಕಿಕೊಳ್ಳೋಣ. ವಿನಾಕಾರಣ ಮಾತನಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿಕೊಂಡರು.

ಇನ್ನು ಶಾಲೆಗಳಲ್ಲಿ ಸಮವಸ್ತ್ರ ಪ್ರಕರಣದ ಅರ್ಜಿಯೂ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಆಗಿದೆ. ಈ ಬಗ್ಗೆ ಮಧ್ಯಾಹ್ನ ಕೇಸ್ ವಿಚಾರಣೆ ನಡೆಯಲಿದೆ. ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಕಾಲೇಜುಗಳಿಗೆ ರಜೆ ಕೊಡಲಾಗಿದೆ. ಹೀಗಾಗಿ ಯಾವ ಸಂಘಟನೆಗಳು ಕೂಡ ವಿದ್ಯಾರ್ಥಿಗಳಿಗೆ ಪ್ರಚೋದನೆ ಕೊಡಬಾರದು. ಪ್ರಕರಣ ಕೋರ್ಟನಲ್ಲಿ ಇರುವ ಹಿನ್ನೆಲೆ ಕೋರ್ಟ ತೀರ್ಪಿಗಾಗಿ ಎಲ್ಲರೂ ಕಾಯೋಣ. ರಾಜ್ಯದಲ್ಲಿ ಶಾಂತಿ ಕದಡುವ ಬಗ್ಗೆ ಯಾರು ಕೂಡ ಮಾತಾಡಬಾರದು ಎಂದು ಸಿಎಂ ಬೊಮ್ಮಾಯಿ ಎಚ್ಚರಿಸಿದರು.

ಇಂದು ಸಂಜೆ ಶಿಕ್ಷಣ ಸಚಿವರು ಮತ್ತು ಗೃಹ ಸಚಿವರ ಜೊತೆ ಸಭೆ ನಡೆಸುತ್ತೇನೆ. ಶಾಲಾ ಕಾಲೇಜುಗಳಲ್ಲಿ ಮೊದಲಿನ ತರಹ ಸೌಹಾರ್ದ ಶಾಂತಿ ತರುವ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಕಾಲೇಜು ರಜೆ ವಿಸ್ತರಣೆ ಬಗ್ಗೆ ಸಂಜೆ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ ರಾಜ್ಯದಲ್ಲಿ ಹಿಜಾಬ್-ಕೇಸರಿ ವಿಚಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಕೆಲಸವನ್ನು ಯಾರೂ ಮಾಡಬಾರದು ಎಂದು ರಾಜ್ಯದ ಜನತೆಗೆ ಸಿಎಂ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.

 

Tags:

error: Content is protected !!