ಕೃಷಿ ಜಮೀನು ಎಷ್ಟಿದೆ ಅನ್ನೋದು ಮುಖ್ಯವಲ್ಲ. ಇರೋ ಕೃಷಿ ಜಮೀನಿನಲ್ಲಿ ಎಷ್ಟು ಆದಾಯ ಗಳಿಸ್ತಿದ್ದೇವೆ ಅನ್ನೋದು ಮುಖ್ಯ. ವಿಜಯಪುರದಲ್ಲಿ ರೈತ ದಂಪತಿ 1 ಎಕರೆಯಲ್ಲೊ ರೇಷ್ಮೆ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಈ ಕುರಿತು ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…
ಹಚ್ಚು ಹಸಿರಾಗಿ ಬೆಳೆದಿರೋ ಹಿಪ್ಪೆ ನೇರಳೆ, ರೇಷ್ಮೆ ಕೃಷಿ ನೋಡಲು ಭೇಟಿ ನೀಡಿರೋ ಅಧಿಕಾರಿಗಳು. ಗೂಡು ಕಟ್ಟಲು ರೆಡಿಯಾಗಿರೋ ರೇಷ್ಮೆ ಹುಳುಗಳು. ಈ ದೃಶ್ಯ ಕಂಡು ಬಂದಿರೋದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದಲ್ಲಿ. ಹೌದು ಮದಗುಣಕಿ ಗ್ರಾಮದ ರೈತ ಗದಿಗೆಪ್ಪ ಕೆಂಭಾವಿ ಅನ್ನೋವರಿಗೆ ಇರೋದು ಎರಡುವರೆ ಎಕರೆ ಜಮೀನು. ಎಲ್ಲರಂತೆ ಇವರು ಮೊದಲು ಶೇಂಗಾ, ಗೋವಿನ ಜೋಳ ಸೇರಿದಂತೆ ಸಾಂಪ್ರದಾಯಿಕ ಬೆಳೆ ಬೆಳೆಯುತ್ತಿದ್ದರು.
ಆದ್ರೆ ಖರ್ಚು ಜಾಸ್ತಿಯಾಗಿ ಆದಾಯವೂ ಅಷ್ಟಕಷ್ಟೆ ಬರುತಿತ್ತು. ಐದು ವರ್ಷಗಳಿಂದ 1 ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿ ಮಾಡಿ, ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇವರ ರೇಷ್ಮೆ ಕೃಷಿಗೆ ಪತ್ನಿ ಪ್ರೇಮಾ ಕೂಡಾ ಸಾಥ್ ನೀಡಿದ್ದಾರೆ. ಅಂಗೈ ಅಗಲದ ಹೊಲದಲ್ಲಿ ಹಚ್ಚು ಹಸಿರಾಗಿ ಹಿಪ್ಪೆ ನೇರಳೆ ಫಸಲು ಬೆಳೆದಿದ್ದಾರೆ. ವರ್ಷಕ್ಕೆ ನಾಲ್ಕು, ಐದು ಬಾರಿ ರೇಷ್ಮೆ ಬೆಳೆ ತೆಗೆಯುತ್ತಾರೆ. ರೇಷ್ಮೆ ಕೃಷಿ ಮಾಡೋಕೆ ಖರ್ಚು ಕಡಿಮೆ ಯಾಕಂದ್ರೆ, ಬೆಳೆಗೆ ಔಷಧಿ ಸಿಂಪಡಣೆ, ಕಳೆ ನಾಶಕ, ಜೊತೆಗೆ ರೋಗ ರುಜಿನಗಳು ಕಡಿಮೆ ಹೀಗಾಗಿ ಖರ್ಚು ಕಡಿಮೆ ಬರುತ್ತೆ ಜೊತೆಗೆ ಆದಾಯ ಜಾಸ್ತಿ ಬರುತ್ತದೆ. ಇದರಿಂದ ವರ್ಷಕ್ಕೆ ಐದಾರು ಲಕ್ಷ ಆದಾಯ ಬರುತ್ತಿದೆ ಅಂತಾರೆ ರೈತ ಗದಿಗೆಪ್ಪ ಕೆಂಭಾವಿ…
ಇನ್ನು ರೈತ ಗದಿಗೆಪ್ಪ ಕೆಂಭಾವಿ ಅವರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 1 ಲಕ್ಷ ಸಹಾಯಧನ ಪಡೆದುಕೊಂಡಿದ್ದಾರೆ. ಈವರೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗ್ತಿತ್ತು. ಇದೀಗ ರೈತರು ಬೆಳೆ ಬೆಳೆಯಲು ಈ ಯೋಜನೆಯಡಿ ಸಹಾಯಧನ ಪಡೆದುಕೊಳ್ಳಬಹುದು. ತಮ್ಮದೇ ಜಮೀನಿನಲ್ಲಿ ತಾವೇ ಕೆಲಸ ಮಾಡಿ ಆದಾಯ ಗಳಿಸೋ ಯೋಜನೆಯಾಗಿ ಎಂಜಿಎನ್ಆರ್ ಇಜಿ ಬದಲಾಗಿದೆ. ರೈತ ಗದಿಗೆಪ್ಪ ಕೆಂಭಾವಿ ರೇಷ್ಮೆ ಗೂಡುಗಳನ್ನು ರಾಮನಗರ ಹಾಗೂ ಜಮಖಂಡಿ
ಮಾರುಕಟ್ಟೆಗೆ ಕಳುಹಿಸುತ್ತಾರೆ. ಇದೀಗ ಮತ್ತೆ ರೇಷ್ಮೆ ಹೂಳುಗಳು ಗೂಡು ಕಟ್ಟಲು ರೆಡಿಯಾಗಿವೆ. ರೇಷ್ಮೆ ಕೃಷಿ ಕೈಗೊಳ್ಳಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ರೈತರಿಗೆ ವರದಾನವಾಗಿದೆ ಅಂತಾರೆ ಅಧಿಕಾರಿಗಳು…
ಒಟ್ಟಿನಲ್ಲಿ ರೈತರು ಮನಸ್ಸು ಮಾಡಿದ್ರೆ. ಅಂಗೈಯಷ್ಟು ಜಮೀನಿನಲ್ಲೂ ಬಂಪರ್ ಬೆಳೆ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಬಹುದು ಅಂತಾ ರೈತ ಗದಿಗೆಪ್ಪ ಕೆಂಭಾವಿ ತೋರಿಸಿಕೊಟ್ಟಿದ್ದಾರೆ. ಇವರ ರೇಷ್ಮೆ ಕೃಷಿ ಇತರೆ ರೈತರಿಗೂ ಮಾದರಿಯಾಗಿದೆ…