ರಾಷ್ಟ್ರಧ್ವಜವನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಷ್ಟ್ರದ್ರೋಹದ ಕೇಸ್ ಹಾಕಿ ಡಿ.ಕೆ.ಶಿವಕುಮಾರ್‍ನ್ನು ಬಂಧಿಸಬೇಕು. ಗೃಹ ಸಚಿವರಿಗೆ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಮಾಡಿದರು.

ಸದನದಲ್ಲಿ ಸಚಿವ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಸದಸ್ಯರು ಸಮರ ಸಾರಿದ್ದಾರೆ. ಈ ಬಗ್ಗೆ ವಿಧಾನಸೌಧ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಈಶ್ವರಪ್ಪ ಸದನದಲ್ಲಿ ಎಂದೂ ಆಗದ ರೀತಿಯಲ್ಲಿ ಧರಣಿ ಆಗಿದೆ. ರಾಷ್ಟ್ರಧ್ವಜದ ಬಗ್ಗೆ ಕಾಂಗ್ರೆಸ್‍ಗೆ ಗೌರವ ಇಲ್ಲ. ಜೈಲಿಗೆ ಹೋಗಿ ಬಂದಂತಹ ವ್ಯಕ್ತಿ ಡಿ.ಕೆ.ಶಿವಕುಮಾರ್. ಯಾವಾಗ ಮತ್ತೆ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ. ಅವರು ನನಗೆ ಹೇಳುತ್ತಾರೆ ರಾಷ್ಟ್ರದ್ರೋಹಿ ಅಂತಾ ಎಂದು ಕಿಡಿಕಾರಿದರು.
ವಿಧಾನಸಭೆಗೆ ರಾಷ್ಟ್ರಧ್ವಜ ತಂದು ಅವಮಾನ ಮಾಡಿದ್ದಾರೆ. ಹಿಂದೂ-ಮುಸ್ಲಿಂ ಎಂದು ಸಮಾಜ ಒಡೆದು ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರು ಹಿಜಾಬ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಹೇಳಿದ್ದು ಹಿಂದುತ್ವದ ವಿಚಾರ ಚರ್ಚೆಯಲ್ಲಿದೆ. ಭಗವಾ ಧ್ವಜ ನೂರು, ಇನ್ನೂರು ವರ್ಷಕ್ಕೋ ಹಾರಬಹುದು ಎಂದು ಹೇಳಿದ್ದೆ. ಕೆಂಪು ಕೋಟೆ ಮೇಲೆ ಭಗವಾ ಧ್ವಜ ಹಾರಬಹುದು ಎಂದಿದ್ದೆ. ಆ ಮಾತನ್ನು ಬಳಸಿಕೊಂಡು ಬೆಂಕಿ ಹಚ್ಚುವ ಯತ್ನ ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಡಿಕಾರಿದರು.