Belagavi

ಮಳೆಗಾಲದಲ್ಲಿ ರೈತರಿಗೆ ಒಂದು ಹೆಜ್ಜೆ ಇಡಲು ಆಗೋದಿಲ್ಲ: ಹೊಲಗಳ ರಸ್ತೆ ನಿರ್ಮಾಣ ಮಾಡಿಕೊಡಿ: ಸದನದಲ್ಲಿ ಮಹಾಂತೇಶ ಕೌಜಲಗಿ ಆಗ್ರಹ

Share

ಮಲಪ್ರಭಾ ನದಿ ಯೋಜನೆಯಲ್ಲಿ ಈ ಭಾಗದ ರೈತರು ಕೇವಲ 5 ಸಾವಿರ ರೂಪಾಯಿಗೆ ತಮ್ಮ ಹೊಲವನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ಹೀಗಾಗಿ ಇಲ್ಲಿ ಮುಳುಗಡೆಯಾದ ಗ್ರಾಮಗಳ ಹೊಲಗಳ ರಸ್ತೆಯನ್ನು ಶೀಘ್ರವೇ ನಿರ್ಮಾಣ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸದನದಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಆಗ್ರಹಿಸಿದರು.

ವಿಧಾನಮಂಡಲ ಅಧಿವೇಶನದ ಎರಡನೇ ಪ್ರಶ್ನೋತ್ತರ ಕಲಾಪದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಮಹಾಂತೇಶ ಕೌಜಲಗಿ ಬೈಲಹೊಂಗಲ ಮತಕ್ಷೇತ್ರದಲ್ಲಿ ಸುಮಾರು 27 ಹಳ್ಳಿಗಳು ಮಲಪ್ರಭಾ ಯೋಜನೆ ಒಳಗೆ ಮುಳುಗಡೆಯಾಗಿವೆ ಎಂದು ತಾವೇ ಒಪ್ಪಿಕೊಂಡಿದ್ದಿರಿ. ಖಾನಾಪುರ, ಕಿತ್ತೂರು, ಬೈಲಹೊಂಗಲ, ಸವದತ್ತಿಯ ನಾಲ್ಕು ತಾಲೂಕಿನ ಹಳ್ಳಿಗಳು ಮುಳುಗಡೆಯಾಗಿವೆ. ಇಲ್ಲಿ ಕಪ್ಪು ಮಿಶ್ರಿತ ಮಣ್ಣಿದೆ, ಆ ರಸ್ತೆ ಎಲ್ಲವೂ ನೀರಾವರಿಗೆ ಸಂಬಂಧಿಸಿದ ಎಲ್ಲ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ ಎಂದು ಒಪ್ಪಿಕೊಂಡಿದ್ದಿರಿ. ಹೀಗಾಗಿ ತಮ್ಮ ಅಧಿಕಾರಿ ಓರ್ವರನ್ನು ಅಲ್ಲಿಗೆ ಕಳಿಸಿಕೊಡಬೇಕು. ಮಳೆಗಾಲದ ಸಂದರ್ಭದಲ್ಲಿ ಒಂದು ಹೆಜ್ಜೆ ಇಡಲು ಆಗೋದಿಲ್ಲ, ಚಕ್ಕಡಿಗಳು ಕೂಡ ಹೋಗದ ಪರಿಸ್ಥಿತಿಯಿದೆ. ಅಂದಾಜು ಪತ್ರಿಕೆ ತಯಾರಿಸಲು ಹೇಳಿದ್ದೇನೆ ಎಂದು ಹೇಳಿದ್ದಿರಿ, ಆದರೆ ಅಂದಾಜು ಪತ್ರಿಕೆ ತಯಾರಿಸುವುದಷ್ಟೇ ಅಲ್ಲದೇ ಅದಕ್ಕೆ ಆದಷ್ಟು ಬೇಗನೇ ಆಡಳಿತಾತ್ಮಕ ಅನುಮೋದನೆ ಕೊಟ್ಟು ಕೆಲಸ ಮಾಡಿ ಕೊಡಿ ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ ಅವರು ಬಿಸಿ ಸಾಯಿಲ್ ಏರಿಯಾದಲ್ಲಿ ಆ ಯೋಜನೆಗಳು ಇರೋದರಿಂದ ಮತ್ತು ಕಳೆದ ಮೂರು ವರ್ಷಗಳಿಂದ ಅತೀ ಹೆಚ್ಚು ಮಳೆಯಾಗಿದ್ದರಿಂದ ರಸ್ತೆಗಳು ಹಾಳಾಗಿದ್ದು ಸರ್ಕಾರದ ಗಮನಕ್ಕೆ ಬಂದಿದೆ. ಈಗಾಗಲೇ ಹಳೆ ಏಣಗಿಯಿಂದ ಹೊಸ ಏಣಗಿವರೆಗೆ 6 ಕಿ.ಮೀ. ರಸ್ತೆಗೆ 309 ಲಕ್ಷ ಅನುದಾನ ಕಾಮಗಾರಿಗೆ ಎಸ್ಟಿಮೇಟ್ ಆಗಿದೆ. ಮಲ್ಲೂರು ಜಾಕ್‍ವ್ಹೇಲ್, ಬಡ್ಲಿ-ಹಳೆ ಬಡ್ಲಿ, ಸುತಗಟ್ಟಿ-ಹಿಟ್ಟಣಗಿ-ಏಣಗಿ ಇವರು ಮೂರು ಮಾಡಲು ಸೂಚನೆ ಕೊಟ್ಟಿದ್ದೇನೆ. ಆದಷ್ಟು ಬೇಗಬೇ ಮಂಜೂರಾತಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ಇದಕ್ಕೆ ಸಮಾಧಾನ ಆಗದ ಮಹಾಂತೇಶ ಕೌಜಲಗಿ ಅವರು ಆ ಯೋಜನೆ ಆಗುವ ಸಂದರ್ಭದಲ್ಲಿ ಆ ಭಾಗದ ರೈತರು ಕೇವಲ 5 ಸಾವಿರ ಏಕರೆ ಭೂಮಿಯನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ಹೀಗಾಗಿ ಅಷ್ಟು ಕೆಲಸಗಳನ್ನು ಆದಷ್ಟು ಬೇಗನೇ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ ಅವರು ಹಿಂದೆ ಯೋಜನೆಗಳನ್ನು ಆರಂಭಿಸುವ ಸಂದರ್ಭದಲ್ಲಿ ಭೂಮಿ ಬೆಲೆ ಏಕರೆಗೆ 1 ಸಾವಿರ ರೂಪಾಯಿ ಕೂಡ ಇರಲಿಲ್ಲ. ದೇಶದಲ್ಲಿ ಗಂಗಾ ನದಿ ಬಿಟ್ಟರೆ ಕೃಷ್ಣಾ ನದಿಯೇ ಫಲವತ್ತಾದ ಭೂಮಿ ಹೊಂದಿದೆ. ನಮ್ಮ ಬಂಧುಗಳು 2 ಸಾವಿರಕ್ಕೆ ಹೊಲವನ್ನು ಕೊಟ್ಟಿದ್ದಾರೆ. ಅವತ್ತಿನ ಕಾಲಮಿತಿಗೆ ಹಣದ ಬೆಲೆ ಇತ್ತು ಆ ರೀತಿ ಕೊಟ್ಟಿದ್ದಾರೆ. ಹೀಗಾಗಿ ತೊಂದರೆ ಆದವರಿಗೆ, ಸಂತ್ರಸ್ತರಿಗೆ ಸರ್ಕಾರ ಖಂಡಿತವಾಗಲೂ ನೆರವಿಗೆ ಬರುತ್ತದೆ ಎಂದರು.

Tags:

error: Content is protected !!