ಸರ್ಕಾರಿ ದಾಖಲಾತಿಗಳನ್ನು ಮರಾಠಿ ಭಾಷೆಯಲ್ಲಿಯೇ ನೀಡುವಂತೆ ಎಂಇಎಸ್ ಮುಖಂಡರು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅವರಿಗೆ ಮನವಿ ಸಲ್ಲಿಸಿದರು.

ಸೋಮವಾರ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಎಂಇಎಸ್ ಮುಖಂಡರು ಈ ಸಂಬಂಧ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾದರು.

ಕರ್ನಾಟಕ ಆಡಳಿತ ಭಾಷೆ ಕಾನೂನು 1963 ಮತ್ತು ಸ್ಥಳೀಯ ಸಂಸ್ಥೆಗಳ ಆಡಳಿತ ಭಾಷೆ ಕಾನೂನು 1981ರ ಅಡಿಯಲ್ಲಿ ಬೆಳಗಾವಿ ಜಿಲ್ಲೆಯ ಬೆಳಗಾವಿ, ಅಥಣಿ, ಚಿಕ್ಕೋಡಿ, ಖಾನಾಪುರ, ಕಾರವಾರ ಜಿಲ್ಲೆಯ ಸುಪಾ, ಹಳ್ಯಾಳ, ಕಾರವಾರ, ಬೀದರ್ ಜಿಲ್ಲೆಯ ಔರಾದ್, ಭಾಲ್ಕಿ, ಬೀದರ್‍ನಲ್ಲಿ ಮರಾಠಿ ಭಾಷೆ ಮಾತನಾಡುವವರ ಸಂಖ್ಯೆ ಶೇ.15ಕ್ಕಿಂತ ಹೆಚ್ಚಿಗಿದೆ ಎಂದು ಘೋಷಿಸಲಾಗಿದೆ. ಕೇರಳದ ಕಾಸರಗೋಡಿನಲ್ಲಿ ಅಲ್ಲಿನ ಸರ್ಕಾರ ಕನ್ನಡ ಭಾಷಿಕರಿಗೆ ಕನ್ನಡ ಭಾಷೆಗಳಲ್ಲಿಯೇ ದಾಖಲಾತಿಗಳನ್ನು ನೀಡುತ್ತಿದ್ದಾರೆ. ಅದೇ ಪ್ರಕಾರ ಇಲ್ಲಿಯೂ ನಮಗೆ ಮರಾಠಿ ಭಾಷೆಯಲ್ಲಿಯೇ ದಾಖಲಾತಿ ಕೊಡಬೇಕು. ಅದೇ ರೀತಿ ನಾವು ಕೊಡುವ ಅರ್ಜಿಯ ಉತ್ತರವನ್ನು ಮರಾಠಿಯಲ್ಲಿಯೇ ಕೊಡಬೇಕು. ಅದೇ ರೀತಿ ಜಾಗೃತಿ ಅಭಿಯಾನದ ಭಿತ್ತಿ ಪತ್ರಗಳನ್ನು ಮರಾಠಿ ಭಾಷೆಯಲ್ಲಿ ಪ್ರಕಟಿಸಬೇಕು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನಾಮಫಲಕಗಳು ಕನ್ನಡ, ಮರಾಠಿ, ಇಂಗ್ಲೀಷ್ ಮೂರು ಭಾಷೆಗಳಲ್ಲಿ ಇರಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಎಂಇಎಸ್ ಅಧ್ಯಕ್ಷ ದೀಪಕ್ ದಳವಿ, ಮಾಜಿ ಶಾಸಕ ಮನೋಹರ್ ಕಿಣೇಕರ್, ಮಾಳೋಜಿ ಅಷ್ಟೇಕರ್, ಪ್ರಕಾಶ ಮರಗಾಳೆ, ವಿಕಾಸ್ ಕಲಘಟಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.