ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ರಾಷ್ಟ್ರಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮನವರ 193ನೇ ಸ್ಮರಣೋತ್ಸವ ಹಾಗೂ ಸಮಾಜ ಸುಧಾರಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೈಲಹೊಂಗಲ ಪಟ್ಟಣದ ಚೆನ್ನಮ್ಮಾಜಿ ಐಕ್ಯ ಮಂಟಪ ರಸ್ತೆ ಗಣಾಚಾರಿ ಕಾಲೇಜು ಆವರಣದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಕ್ಷೇತ್ರ, ಹಾಗೂ ಕಿತ್ತೂರು ನಾಡಿನ ಲಿಂಗಾಯತ ಪಂಚಮಸಾಲಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬೈಲಹೊಂಗಲ ಮಾಜಿ ಶಾಸಕ ವಿ.ಆಯ್ ಪಾಟೀಲ್, ಸಮಾಜ ಸಂಘಟನೆಯ ಉದ್ದೇಶದಿಂದ ಎಲ್ಲರೂ ಸೇರುವುದು ಅಗತ್ಯ. ಹಾಗಾಗಿ ಇಂದು ಸ್ವಾಮಿಜಿಯವರ ನೇತೃತ್ವದಲ್ಲಿ ನಾವೆಲ್ಲ ಸೇರಿದ್ದೇವೆ, ಸ್ವಾಮಿಜಿ ನಮ್ಮೆಲ್ಲರಿಗೆ ಮಾರ್ಗದರ್ಶಕರಾಗಿ ಕಾರ್ಯ ಮಾಡುತ್ತಿದ್ದಾರೆ. ಹಾಗಾಗಿ ನಾವೆಲ್ಲರೂ ಚೆನ್ನಮ್ಮಾಜಿ ಆದರ್ಶಗಳನ್ನು ಪಾಲಿಸಿ ಸಮಾಜ ಸಂಘಟನೆಯ ದೃಷ್ಟಿಯಿಂದ ಕಾರ್ಯ ಮಾಡಬೇಕೆಂದು ಕರೆ ನೀಡಿದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಿತ್ತೂರು ಚೆನ್ನಮ್ಮಾಜಿಯ ಪುಣ್ಯಸ್ಮರಣೆಯ ಈ ಕಾರ್ಯಕ್ರಮದ ದಿವಸ ನಾವು ಒಳ್ಳೆಯ ನಿರ್ಧಾರ ಮಾಡೋಣ. ನಾವು ಯಾರಿಗೂ ತಲೆ ಕೆಡಿಸಿಕೊಳ್ಳದೇ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತೇವೆ. ನಾನು ಬೆಳಗಾವಿ ಅಧಿವೇಶನದಲ್ಲಿ ಈ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಅವರು ಈ ಬಜೆಟ್ ಅಧಿವೇಶನದ ಒಳಗೆ ಮೀಸಲಾತಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ದೆಹಲಿಗೆ ಹೋಗುವುದಾದರೂ ನಾವೆಲ್ಲರೂ ಸೇರಿ ದೆಹಲಿಗೆ ಹೋಗಿ ಮೀಸಲಾತಿ ತರೋಣ. ಇನ್ನು ಲಿಂಗಾಯತ ಧರ್ಮದ ಎಲ್ಲಾ ಒಳ ಪಂಗಡಗಳನ್ನು ಸೇರಿಸಿಕೊಂಡೇ ಈ ಮೀಸಲಾತಿ ನೀಡಬೇಕೆಂದು ಒತ್ತಾಯ ಮಾಡಲಾಗುತ್ತೆ. ಈ ಕುರಿತಂತೆ ಯಾರ ತಲೆಯಲ್ಲಿಯೂ ಕಲ್ಪನೆ ಬೇಡ. ಇನ್ನು ಬೆಳಗಾವಿಯಲ್ಲಿ ನಾವೆಲೆಲ ಸೇರಲಿದ್ದೇವೆ. ಸಭೆಯಲ್ಲಿ ಈ ಕುರಿತಂತೆ ಚರ್ಚೆ ಮಾಡಲಾಗುತ್ತದೆ ಎಂದರು.
ಇನ್ನು ರಾಜ್ಯದಲ್ಲಿ ಮತ್ತೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಭುಗಿಲೆದ್ದಿದೆ. ಇನ್ನು ಬೆಳಗಾವಿಯಲ್ಲಿ ಈ ಕುರಿತಂತೆ ಸಭೆ ನಡೆಯಲಿದ್ದು ಈ ಕುರಿತಂತೆ ಚರ್ಚೆ ಮಾಡಲಾಗುತ್ತದೆ. ಇನ್ನು ಮೀಸಲಾತಿ ಹೋರಾಟ ಕುರಿತಂತೆ ಸಮಾಜದ ಮುಂದಿನ ನಡೆ ಏನು ಎಂದು ಕಾದು ನೋಡಬೇಕಿದೆ.