ಗ್ಯಾರೇಜ್ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಯುವಕನೊರ್ವನ ಮೇಲೆ ಗಾಂಜಾ ಗ್ಯಾಂಗ್ ಅಟ್ಯಾಕ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಕುಂದಾನಗರಿ ಬೆಳಗಾವಿ ಜನರನ್ನು ಬೆಚ್ಚಿ ಬೀಳಿಸಿದೆ.

ಹೌದು ಹೀಗೆ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಯುವಕನ ಹೆಸರು ಮಹಮ್ಮದ್ ಕೈಫ ತನ್ವೀರ್ ಬಾಗವಾನ್(20) ಅಂತಾ. ಬೆಳಗಾವಿಯ ಗಾಂಧಿ ನಗರದ ನಿವಾಸಿ. ಇಲ್ಲಿಯೇ ಮೆಕ್ಯಾನಿಕ್‍ವೊಂದರಲ್ಲಿ ಕೆಲಸ ಮಾಡುತ್ತಾನೆ. ಹೀಗೆ ನಿನ್ನೆ ಗುರುವಾರ ಮೆಕ್ಯಾನಿಕ್ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ಐದಾರು ಮಂದಿ ಇರುವ ಗಾಂಜಾ ಗ್ಯಾಂಗ್‍ವೊಂದು ಈ ಯುವಕನ ಮೇಲೆ ಅಟ್ಯಾಕ್ ಮಾಡಿದೆ. ತಲವಾರ್, ಚಾಕು, ಬ್ಲೇಡ್‍ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಒಂದು ಕೈಯಂತೂ ನಜ್ಜು ಗುಜ್ಜಾಗಿದೆ, ಬೆನ್ನು ಭಾಗ ಸೇರಿದಂತೆ ದೇಹದ ಇತರೆ ಭಾಗಗಳಿಗೂ ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಕೂಗಾಡುತ್ತಿದ್ದಂತೆ ಆ ಗಾಂಜಾ ಗ್ಯಾಂಗ್ ಯುವಕ ಕೈಫ್‍ನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಮುಸ್ತಾಕ್ ದೇವಲಾಪುರೆ ಸೇರಿ ಆರು ಜನರ ತಂಡ ಕೈಫ್ ಮೇಲೆ ಹಲ್ಲೆ ಬರ್ಬರವಾಗಿ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾಗಿ ಒದ್ದಾಡುತ್ತಿದ್ದ ಯುವಕನನ್ನು ತಕ್ಷಣವೇ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸಧ್ಯ ಜಿಲ್ಲಾಸ್ಪತ್ರೆಯಲ್ಲಿ ಕೈಫ್ ಚಿಕಿತ್ಸೆ ಪಡೆಯುತ್ತಿದ್ದು. ಪ್ರಾಣಾಪಾಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿರುವ ಹಲ್ಲೆಗೊಳಗಾದ ಕೈಫ್ ಆರು ಮಂದಿ ನನಗೆ ತಲವಾರ್‍ನಿಂದ ಹೊಡೆದಿದ್ದಾರೆ ಎಂದು ಘಟನೆ ಕುರಿತು ಮಾಹಿತಿ ನೀಡಿದ್ದಾನೆ.
ಇದೇ ವೇಳೆ ಮಾತನಾಡಿದ ಕೈಫ್ ತಾಯಿ ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಇಲ್ಲಿಯವರೆಗೂ ಒಂದು ಪೆಟ್ಟು ನಾವು ಹೊಡೆದಿಲ್ಲ. ನಶೆ ಮಾಡಿಕೊಂಡು ಈ ರೀತಿ ನಮ್ಮ ಮಗನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಇನ್ನು ಆಸ್ಪತ್ರೆಗೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು ಎಫ್‍ಐಆರ್ ಮಾಡಿಕೊಂಡು ತನಿಖೆ ಮಾಡುತ್ತೇವೆ. ಆರೋಪಿಗಳನ್ನು ತಕ್ಷಣವೇ ಬಂಧಿಸುತ್ತೇವೆ. ಇನ್ನು ಗಾಂಜಾ ಕುರಿತು ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ. ಹಲ್ಲೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಕೈಫ್ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಗಾಂಜಾ ನಶೆಯಲ್ಲಿ ಈ ರೀತಿ ಖದೀಮರು ಅಮಾನುಷವಾಗಿ ಹಲ್ಲೆ ಮಾಡಿದ್ದರಿಂದ ಬೆಳಗಾವಿಯಲ್ಲಿ ಜನ ಬೆಚ್ಚಿ ಬಿದ್ದಿದ್ದಾರೆ. ಇಷ್ಟೇಲ್ಲಾ ರಾಜಾರೋಷವಾಗಿ ಆಗುತ್ತಿದ್ದರು ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡು ಬೆಳಗಾವಿಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.