ಬೆಳಗಾವಿ ನಗರದಲ್ಲಿ ಇನ್ಮುಂದೆ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಆದರೆ ನಿಮ್ಮನ್ನು ಕಟ್ಟಿ ಹಾಕಿ, ಬ್ಲ್ಯಾಕ್ ಲಿಸ್ಟ್‍ಗೆ ಸೇರಿಸಬೇಕಾಗುತ್ತದೆ ಎಂದು ಎಲ್ ಆಂಡ್ ಟಿ ಕಂಪನಿ ಅಧಿಕಾರಿಗಳಿಗೆ ದಕ್ಷಿಣ ಶಾಸಕ ಅಭಯ್ ಪಾಟೀಲ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಹೌದು ಬೆಳಗಾವಿ ನಗರದಲ್ಲಿ ನೀರು ಸರಬರಾಜಿನ ಜವಾಬ್ದಾರಿಯನ್ನು ಎಲ್ ಆಂಡ್ ಟಿ ಕಂಪನಿ ಮಹಾನಗರ ಪಾಲಿಕೆ ಜವಾಬ್ದಾರಿ ಕೊಟ್ಟಿತೋ ಅವತ್ತಿನಿಂದ ಇಲ್ಲಿಯವರೆಗೂ ನೀರಿನ ತೊಂದರೆ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಪೈಪ್‍ಲೈನ್ ಸೋರಿಕೆ ಆಗಿದ್ದ ಬಗ್ಗೆ ದೂರು ನೀಡಿದ್ರೂ ಒಂದು ವಾರಗಟ್ಟಲೇ ದುರಸ್ಥಿ ಮಾಡದೇ ಎಲ್ ಆಂಡ್ ಟಿ ಅಧಿಕಾರಿಗಳು ಬೇಜಾವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಎಲ್ ಆಂಡ್ ಟಿ ಕಂಪನಿಗಳಿಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಸೋಮವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸಭೆ ನಡೆಸಿದ ಶಾಸಕ ಅಭಯ್ ಪಾಟೀಲ್ ಮಾತನಾಡಿ ನಿನ್ನೆ ದಕ್ಷಿಣ ಕ್ಷೇತ್ರದಲ್ಲಿ ಅನೇಕ ಕಡೆ ಸಂಚಾರ ಮಾಡಿದ್ದೇನೆ. ಜನರು ಎಲ್ ಆಂಡ್ ಟಿ ಕಂಪನಿ ವಿರುದ್ಧ ಸಾಕಷ್ಟು ತಕರಾರು ಕೊಟ್ಟಿದ್ದಾರೆ. ಆದ್ದರಿಂದ ಯಾವುದೇ ಲೀಕೇಜ್ ಇದ್ದರೂ ಕೂಡ ಯಾಕೆ ಅದನ್ನು ದುರಸ್ಥಿ ಮಾಡಲು ಹೋಗುತ್ತಿಲ್ಲ. ನಗರ ಸೇವಕರು, ಸಾರ್ವಜನಿಕರು ತಮಗೆ ಫೋನ್ ಮಾಡಿದ್ರೂ ಕೂಡ ನೀವು ಸ್ಪಂದಿಸುತ್ತಿಲ್ಲ. ಪೈಪ್‍ಲೈನ್ ಕಾಮಗಾರಿಯಲ್ಲಿ ತೋಡಿದ ತೆಗ್ಗುಗಳನ್ನು ಹಾಗೆ ಬಿಟ್ಟು ಹೋಗುತ್ತಿದ್ದರು. ಅದೇ ರೀತಿ 24/7 ಕುಡಿಯುವ ನೀರು ಇರುವ ಪ್ರದೇಶಗಳಲ್ಲಿಯೂ ಸರಿಯಾಗಿ ಸರಬರಾಜು ಆಗುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಎಲ್ ಆಂಡ್ ಟಿ ಕಂಪನಿಯ ಸಿನಿಯರ್ ಅಧಿಕಾರಿಗಳು ಯಾಕೆ ಬೆಳಗಾವಿಗೆ ಬರುತ್ತಿಲ್ಲ. ಇದೇ ರೀತಿ ನೀವು ಬೇಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಮುಂದುವರಿಸಿದ್ರೆ ಹಿರಿಯ ಅಧಿಕಾರಿಗಳು ಬರೋವರೆಗೂ ಕಿರಿಯ ಅಧಿಕಾರಿಗಳನ್ನು ಕೊಠಡಿಗಳಲ್ಲಿ ಕಟ್ಟಿ ಹಾಕಬೇಕಾಗುತ್ತದೆ. ಹಾಗೂ ಸರ್ಕಾರದಿಂದ ನಿಮ್ಮ ಕಂಪನಿಯನ್ನು ಬ್ಲ್ಯಾಕ್ ಲೀಸ್ಟ್‍ಗೆ ಸೇರಿಸಬೇಕಾಗುತ್ತದೆ ಎಂದು ಅಭಯ್ ಪಾಟೀಲ್ ಎಚ್ಚರಿಕೆ ನೀಡಿದರು.
ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರು ಒಂದು ವರದಿ ಸಿದ್ಧಪಡಿಸಿ, ಏನೇನು ಹಾನಿಯಾಗಿದೆ, ಅದನ್ನು ಈ ಎಲ್ ಆಂಡ್ ಟಿ ಕಂಪನಿಯಿಂದ ತುಂಬಿಸಿಕೊಳ್ಳುವಂತೆ ಇದೇ ವೇಳೆ ಅಭಯ್ ಪಾಟೀಲ್ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಸ್ಮಾರ್ಟಸಿಟಿ ಎಂಡಿ ಪ್ರವೀಣ ಬಾಗೇವಾಡಿ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಸೇರಿದಂತೆ ಕೆಯುಡಬ್ಲುಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.