ಚೆಂಬೆಳಕಿನ ಖ್ಯಾತಿಯ ಕವಿ ನಾಡೋಜ ಚೆನ್ನವೀರ ಕಣವಿ(93) ನಿಧನರಾಗಿದ್ದಾರೆ.ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಹಿರಿಯ ಕವಿ, ನಾಡೋಜ ಚೆನ್ನವೀರ ಕಣವಿ ಧಾರವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಚೆನ್ನವೀರ ಕಣವಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಧಾರವಾಡದ ಎಸ್ಡಿಎಂ ಆಸ್ಪತ್ರೆ ನಿನ್ನೆಯಷ್ಟೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿತ್ತು. ಆ ಬಳಿಕ ಅವರ ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ. ಕಣವಿಯವರ ಶ್ವಾಸಕೋಶದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ಎದೆ ಭಾಗದಲ್ಲಿ ಹೆಚ್ಚಿನ ಸೋಂಕು ಹರಡಿತ್ತು. ಶ್ವಾಸಕೋಶ ಉಸಿರಾಟದ ಶಕ್ತಿ ಕಳೆದುಕೊಂಡಿತ್ತು.

ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ನಿಂದ (ARDS) ಚೆನ್ನವೀರ ಕಣವಿ ಬಳಲುತ್ತಿದ್ದರು. ಸುಮಾರು ಒಂದು ತಿಂಗಳಿನಿಂದ ಎಸ್ಡಿಎಂ ಆಸ್ಪತ್ರೆಯಲ್ಲಿ ಕಣವಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಈ ಮೊದಲು, ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ, ಮತ್ತೆ ಆರೋಗ್ಯ ಕ್ಷೀಣಿಸಿತ್ತು. ಕಣವಿಯವರಿಗೆ ಕೊರೊನಾ ಸೋಂಕು ಕೂಡ ದೃಢಪಟ್ಟಿತ್ತು. ಚೆನ್ನವೀರ ಕಣವಿ ನಿಧನಕ್ಕೆ ಸಿಎಂ ಬೊಮ್ಮಾಯಿ ಸೇರಿದಂತೆ ರಾಜಕೀಯ ನಾಯಕರು, ಹಿರಿಯ ಸಾಹಿತಿಗಳು ಕಂಬನಿ ಮಿಡಿದಿದ್ದಾರೆ.
